ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಬದ್ಧ

KannadaprabhaNewsNetwork |  
Published : Jul 11, 2025, 12:32 AM IST
10ಕೆಡಿವಿಜಿ1, 2, 3-ದಾವಣಗೆರೆಯ ಶಿವ ಪಾರ್ವತಿಯಲ್ಲಿ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರೊಂದಿಗೆ ಸಂವಾದದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಪಾಲಿಕೆ ಆಯುಕ್ತರಾದ ರೇಣುಕಾ ಇದ್ದರು. | Kannada Prabha

ಸಾರಾಂಶ

ಪರಿಸರ, ಜನರ ಆರೋಗ್ಯವನ್ನು ಕಾಪಾಡುವ ಕಾಯಕದಲ್ಲಿ ತಮ್ಮ ವೈಯಕ್ತಿಕ ಆರೋಗ್ಯ, ಬದುಕನ್ನೂ ಲೆಕ್ಕಿಸದ ಪೌರ ಕಾರ್ಮಿಕರೇ ಸಮಾಜದ ನಿಜವಾದ ಆರೋಗ್ಯ ಸೇನಾನಿಗಳಾಗಿದ್ದು, ಇಂತಹವರಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸಿದರು.

ದಾವಣಗೆರೆ: ಪರಿಸರ, ಜನರ ಆರೋಗ್ಯವನ್ನು ಕಾಪಾಡುವ ಕಾಯಕದಲ್ಲಿ ತಮ್ಮ ವೈಯಕ್ತಿಕ ಆರೋಗ್ಯ, ಬದುಕನ್ನೂ ಲೆಕ್ಕಿಸದ ಪೌರ ಕಾರ್ಮಿಕರೇ ಸಮಾಜದ ನಿಜವಾದ ಆರೋಗ್ಯ ಸೇನಾನಿಗಳಾಗಿದ್ದು, ಇಂತಹವರಿಗೆ ಪ್ರತಿಯೊಬ್ಬರೂ ಕೃತಜ್ಞರಾಗಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸಿದರು.

ನಗರದ ತಮ್ಮ ಗೃಹ ಕಚೇರಿ ಶಿವಪಾರ್ವತಿಯಲ್ಲಿ ಗುರುವಾರ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರೊಂದಿಗೆ ಸಂಸದರ ಸಂವಾದದಲ್ಲಿ ಮಾತನಾಡಿದ ಅವರು, ನಗರ ಸ್ವಚ್ಛತೆ, ಆರೋಗ್ಯಯುತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕೆಲಸಕ್ಕೆ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ನಸುಕಿನ 4 ಗಂಟೆಗೆ ಎದ್ದು ಸ್ವಚ್ಛತಾ ಸೇನಾನಿಗಳಾಗಿ ಹೊರಡುವುದರಿಂದ ಪೌರ ಕಾರ್ಮಿಕರ ಕಷ್ಟ ನಷ್ಟ, ಆರೋಗ್ಯ, ಕುಟುಂಬ, ಮಕ್ಕಳ ಶಿಕ್ಷಣ ಹೀಗೆ ಎಲ್ಲಾ ವಿಚಾರದ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ನಗರ ಸ್ವಚ್ಛತೆ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪೌರ ಕಾರ್ಮಿಕರು ಹರಿಸುತ್ತಿರುವ ಶ್ರಮಕ್ಕೆ ಬೆಲೆ ಕಟ್ಟಲಾಗದು. ನಿಸ್ವಾರ್ಥವಾಗಿ ಕಾಯಕ ಯೋಗಿಗಳಾಗಿ ಮಳೆ, ಚಳಿ, ಬಿಸಿಲು, ಗಾಳಿಯನ್ನೂ ಲೆಕ್ಕಿಸದೇ ಪೌರ ಕಾರ್ಮಿಕರು ಸೇವೆಗೆ ನಾವೆಲ್ಲರೂ ನಮಿಸೋಣ ಎಂದು ಹೇಳಿದರು. ಪೌರ ಕಾರ್ಮಿಕರ ಬೇಡಿಕೆ, ಕಷ್ಟ, ಸುಖಗಳ ಬಗ್ಗೆಯೂ ನಮಗೆ ಅರಿವಿದೆ. ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಕಾಯಂ, ಆರೋಗ್ಯ ವಿಮೆ, ಸುರಕ್ಷತಾ ಸಾಧನ ಹಂಚಿಕೆ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಪೌರ ಕಾರ್ಮಿಕರ ಬೇಡಿಕೆ ಮುಂದಿಟ್ಟಿದ್ದೀರಿ. ನಿಮ್ಮ ಸೇವೆ ನಗರಕ್ಕೆ, ಜನತೆಗೆ ಅತ್ಯಂತ ಅಮೂಲ್ಯವಾದುದು. ನಿಮ್ಮ ಬೇಡಿಕೆಗಳೂ ನ್ಯಾಯಸಮ್ಮತವಾಗಿವೆ. ಸರ್ಕಾರದ ಮಟ್ಟದಲ್ಲಿ ಅವುಗಳ ಬಗ್ಗೆ ಗಂಭೀರವಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು. ಪೌರ ಕಾರ್ಮಿಕರ ಸಾಮಾಜಿಕ ಭದ್ರತೆ, ಪಿಂಚಣಿ, ವಸತಿ, ಆರೋಗ್ಯ ಕಾಳಜಿ ಕುರಿತಂತೆ ನವೀನ ಯೋಜನೆಗಳ ರೂಪುರೇಷೆಗಳನ್ನೂ ಶೀಘ್ರದಲ್ಲಿ ಬಿಡುಗಡೆಗೆ ಸರ್ಕಾರ ಚಿಂತನೆ ನಡೆಸಿದ್ದು, ಅದಷ್ಟು ಬೇಗನೆ ಅದು ಕಾರ್ಯ ರೂಪಕ್ಕೆ ಬರುವ ವಿಶ್ವಾಸವಿದೆ. ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ನಿಮ್ಮ ನ್ಯಾಯಯುತ ಬೇಡಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪೌರ ಕಾರ್ಮಿಕರಾದ ಹನುಮಕ್ಕ, ಕಾಟಮ್ಮ, ಮಮತಾ, ಪುಷ್ಪಾ ಮಾತನಾಡಿ, ನಾವು ಕಷ್ಟಪಟ್ಟು ಸ್ವಚ್ಛ ಮಾಡುತ್ತೇವೆ. ಅದನ್ನು ಜನರು ಅರಿಯಬೇಕು. ಕಸವನ್ನು ಸಮರ್ಪಕವಾಗಿ ಮನೆ ಮುಂದೆ ಬರುವ ಗಾಡಿಗೆ ಹಾಕಬೇಕು. ರಾತ್ರೋರಾತ್ರಿ ಎಲ್ಲೆಂದರಲ್ಲಿ ಕಸ ಬಿಸಾಡಬಾರದು. ರಸ್ತೆ ಬದಿ ಕಸ ಹಾಕಬಾರದು. ಎಲ್ಲೆಂದರಲ್ಲಿ ಕಸ ಸುರಿದರೆ ನಾವು ಸ್ವಚ್ಛ ಮಾಡಿದ್ದೂ ಉಪಯೋಗವಾಗದು. ಕೆಲವರಂತೂ ಹಸಿ ಕಸ, ಒಣ ಕಸ ವಿಂಗಡಿಸುವುದಿಲ್ಲ. ರಾತ್ರಿ ವೇಳೆ ಖಾಲಿ ಸೈಟ್, ರಸ್ತೆ ಬದಿ ಕಸ ಹಾಕಿ ಹೋಗುತ್ತಾರೆ. ಪಾಲಿಕೆಯಿಂದ ದಂಡ ವಿಧಿಸಿದರೂ‌ ಪ್ರಯೋಜನವಾಗದ ಸ್ಥಿತಿಯಿದೆ. ಇದು‌ ಬೇಸರದ ಸಂಗತಿ ಎಂದರು.

ಕಸದ ಗಾಡಿ ಚಾಲಕರು, ಸಹಾಯಕರು ಮಾತನಾಡಿ, ಕೆಲವೊಮ್ಮೆ ಗಾಜಿನ ಚೂರುಗಳು, ಅಪಾಯಕಾರಿ ರಕ್ತಸಿಕ್ತ ಬಟ್ಟೆ, ಇಂಜೆಕ್ಷನ್ ಸೂಜಿಗಳನ್ನು ಜನರು‌ ಪ್ರತ್ಯೇಕಿಸುವುದಿಲ್ಲ ಇದರಿಂದ ಅನೇಕ‌ಬಾರಿ ನಮಗೆ ಗಾಯಗಳಾಗಿವೆ. ಜನರು ಈ ಬಗ್ಗೆ ಗಮನ ಹರಿಸಿದರೆ ನಮಗೂ ಒಳ್ಳೆಯದು ಎಂದು ತಮ್ಮ ಅನುಭವ ತಿಳಿಸಿದರು.ಪೌರ ಕಾರ್ಮಿಕರಾದ ಶ್ರೀರಾಮ, ನಾಗರಾಜ ಮಾತನಾಡಿದರು.

ಸಂವಾದದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಪೌರ ಕಾರ್ಮಿಕರು ‌ಇದ್ದರು. ಮೊದಲೆಲ್ಲಾ ಡ್ರೈನೇಜ್ ಕ್ಲೀನ್ ಮಾಡುವಾಗ ಏಣಿ ಹಾಕಿ ಈಚಲು ಪುಟ್ಟಿಗಳಲ್ಲಿ ಹಾಗೂ ಬಕೇಟ್‌ಗಳಲ್ಲಿ ಮಲ, ಮಲಿನವನ್ನು ತೆಗೆಯುತ್ತಿದ್ದೆವು. ಆದರೆ ಈಗ ಯಂತ್ರಗಳು ಬಂದ ಮೇಲೆ ಬದಲಾಗಿದೆ ಅಷ್ಟೇ. ನಮ್ಮ ಕಷ್ಟಗಳು ಹಾಗೆಯೇ ಇವೆ. ಶ್ರೀರಾಮ, ಹಿರಿಯ ಪೌರ ಕಾರ್ಮಿಕ

ಪೌರ ಕಾರ್ಮಿಕರಿಗೆ ರೆಸ್ಟ್ ರೂಮ್

ಪ್ರತಿಯೊಬ್ಬರಿಗೂ ಅವರ ಕೆಲಸದ ಬಗ್ಗೆ ಗೌರವವಿರುತ್ತದೆ. ಪೌರ‌ ಕಾರ್ಮಿಕರು ಬೆಳಗ್ಗೆ 4.30ಕ್ಕೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ. ಅವರು ದುಡಿಯುವುದು ತಮ್ಮ ಮನೆ‌ ನಡೆಸಲು, ಸ್ವಾಭಿಮಾನದಿಂದ ಬದುಕು ಸಾಗಿಸಲು ನಾವೆಲ್ಲರೂ ಪೌರ ಕಾರ್ಮಿಕರ ಕಷ್ಟ ಅರ್ಥ ಮಾಡಿಕೊಳ್ಳಬೇಕು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಪೌರ ಕಾರ್ಮಿಕ ವೃತ್ತಿ ನಿರ್ವಹಿಸುವವರ ಪುತ್ರಿಯೊಬ್ಬರು ನನ್ನ ಭೇಟಿಯಾಗಿ ತಮ್ಮ ತಂದೆ ಕಷ್ಟ ಹೇಳಿಕೊಂಡು ಅತ್ತಿದ್ದನ್ನು ನಾನಿನ್ನೂ ಮರೆಯಲಾಗಿಲ್ಲ. ಆ ವಿದ್ಯಾರ್ಥಿನಿ ತಾನು‌ ಚೆನ್ನಾಗಿ ವಿದ್ಯಾಭ್ಯಾಸ ‌ಮಾಡಿ ತಂದೆಗೆ ನೆರವಾಗುವುದಾಗಿ ಆತ್ಮವಿಶ್ವಾಸದಿಂದ ಹೇಳಿದ್ದು ಎಲ್ಲಾ ಮಕ್ಕಳಿಗೂ ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೆ ಆಯಾ ವಾರ್ಡ್‌ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು