ರಮೇಶ್.ಕೆ.
ಶಾಲಾ ಮಕ್ಕಳ ಪಾಲಿನ ಪೌಷ್ಟಿಕಾಂಶ ಉದ್ದೇಶದ ಮೊಟ್ಟೆ, ಶಿಕ್ಷಕರ ಪಾಲಿಗೆ ಹೊರೆಯಾಗಿ ಪರಿಣಮಿಸಿದ್ದು, ಬೆಲೆ ಹೆಚ್ಚಳದ ವ್ಯತ್ಯಾಸ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಶಿಕ್ಷಕ ಸಮುದಾಯ, ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲ ಬೆಲೆ ಗಗನಮುಖಿಯಾಗಿರುವುದು ಹಾಗೂ ಕೊರತೆಯ ನಡುವೆ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಲೇಬೇಕಿರುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಇದರ ಜತೆಗೆ ಮೊಟ್ಟೆಯ ಬೆಲೆ ವ್ಯತ್ಯಾಸ ಸರಿದೂಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ.ಸರ್ಕಾರಿ ಶಾಲೆಗಳಲ್ಲಿ ಈಗ ಪ್ರತಿ ದಿನ ಶಿಕ್ಷಕರಿಗೆ ಮೊಟ್ಟೆಯದ್ದೇ ಚಿಂತೆ. ಪ್ರತಿ ಮೊಟ್ಟೆ ಬೆಲೆ 7 ರು. ದಾಟಿ ತಿಂಗಳೇ ಕಳೆದಿವೆ. ಆದರೆ, ಸರ್ಕಾರ ನಿಗದಿ ಮಾಡಿರುವುದು ಖರೀದಿಗೆ 5 ರು. ಮಾತ್ರ. ಉಳಿದ 2 ರು. ಗಳನ್ನು ಶಿಕ್ಷಕರೇ ಭರಿಸಬೇಕಿದೆ. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆ ಇರುವ ಶಾಲೆಗಳಲ್ಲಿ ಶಿಕ್ಷಕರು ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ಆದರೆ, ಹೆಚ್ಚು ಮಕ್ಕಳಿರುವ ಶಾಲೆಗಳ ಮುಖ್ಯ ಶಿಕ್ಷಕರ ಪಾಡಂತೂ ಹೇಳತೀರದು. ಇದರ ಜತೆಗೆ ಮೊಟ್ಟೆ ವಿಚಾರದಲ್ಲಿ ಸರ್ಕಾರದ ಮಾನದಂಡ ಶಿಕ್ಷಕರನ್ನು ದೊಡ್ಡ ಇಕ್ಕಟ್ಟಿದೆ ಸಿಲುಕಿಸಿದೆ. ಪ್ರತಿ ಮೊಟ್ಟೆ ಇಂತಿಷ್ಟು ಗ್ರಾಂ ಇರಲೇಬೇಕು. ಖರೀದಿಗೂ ಮುನ್ನ ಮೊಟ್ಟೆಯನ್ನು ನೀರಿನಲ್ಲಿ ಹಾಕಬೇಕು. ಮೊಟ್ಟೆ ತೇಲಿದರೆ ಅದು ಮಕ್ಕಳಿಗೆ ಬಳಕೆಗೆ ಸೂಕ್ತವಲ್ಲ ಎಂದು ತಿರಸ್ಕಾರ ಮಾಡಬೇಕೆನ್ನುವ ನಿಯಮವೂ ಇದೆ. ಆದರೆ, ಪ್ರತಿ ದಿನ ಪ್ರತಿ ಮೊಟ್ಟೆಯ ತೂಕ ಮತ್ತು ಗುಣಮಟ್ಟ ಖರೀದಿಸಿ ತರಲು ಸಾಧ್ಯವೇ ಎನ್ನುವ ಪ್ರಶ್ನೆ ಶಿಕ್ಷಕ ಸಮುದಾಯದ್ದು. ಇದನ್ನು ವಿರೋಧಿಸಿದ ಶಿಕ್ಷಕರ ವಿರುದ್ಧ ಇಲಾಖೆ ಗರಂ ಆದ ಪ್ರಸಂಗವೂ ನಡೆದಿದೆ.
ಕೋಟ್...ಸಾಮಾನ್ಯವಾಗಿ ಶಾಲೆಗಳಿಗೆ ಸರ್ಕಾರವೇ ಟೆಂಡರ್ ಮೂಲಕ ಎಣ್ಣೆ, ಬೇಳೆಯನ್ನು ಸರಬರಾಜು ಮಾಡುತ್ತದೆ. ಆದರೆ, ಈ ಶೈಕ್ಷಣಿಕ ಸಾಲಿನಲ್ಲಿ ಇನ್ನೂ ಎಣ್ಣೆ, ಬೇಳೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ನಮ್ಮ ಧರ್ಮ. ಆದರೆ, ನಿರಂತರವಾಗಿ ಬೆಲೆ ಏರಿಕೆ ಆಗುತ್ತಿರುವ ಕಾರಣ ಈ ಯೋಜನೆಯನ್ನು ಸಮರ್ಪಕವಾಗಿ ನಡೆಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ.
-------ಮೊಟ್ಟೆ ಬೆಲೆ ಏರಿಳಿತ ನಿಜಕ್ಕೂ ಶಿಕ್ಷಕರ ಪಾಲಿಗೆ ಬಿಸಿತುಪ್ಪವಾಗಿದೆ. ಪಾಠ ಮಾಡುವ ಜೊತೆಗೆ ಮೊಟ್ಟೆ ಖರೀದಿಸಿ ಕೊಡುವುದು ದುರಾದೃಷ್ಟ. ಸರ್ಕಾರ ಪ್ರತಿ ತಿಂಗಳು ಜಿಪಂ ಮೂಲಕವೇ ಪ್ರತಿ ದಿನದ ಬೆಲೆ ಆದರಿಸಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಬೇಕು.