ಡಜನ್‌ಗೆ ₹84 ಹೋಲ್‌ಸೆಲ್, ₹95 ರೀಟೆಲ್..! । ಎಗ್ ಪ್ರಿಯರ ಬಾಯಿ ಬೆಲೆಯ ಬಿಸಿರಾಘು ಕಾಕರಮಠ
ಶಾಲೆಗಳು ಆರಂಭವಾದ ಬೆನ್ನಲ್ಲೇ ಕೋಳಿ ಮೊಟ್ಟೆ ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದೆ. ಪ್ರಸ್ತುತ ಅಂಕೋಲಾದಲ್ಲಿ ಹೋಲ್‌ಸೆಲ್ ಮಾರುಕಟ್ಟೆಯಲ್ಲಿ ಡಜನ್ ಮೊಟ್ಟೆಗೆ ₹84 ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ₹95 ವರೆಗೆ ದರ ತಲುಪಿದ್ದು, ಮೊಟ್ಟೆ ಪ್ರಿಯರ ಜೇಬಿಗೆ ಹೆಚ್ಚುವರಿ ಹೊರೆ ತಂದಿದೆ.ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಮೊಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ವಿಶೇಷವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಕೇಕ್ ಮತ್ತು ಬೇಕರಿ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಬಳಕೆಯಾಗುವುದರಿಂದ ದರ ಏರಿಕೆಯಾಗುವುದು ಸಹಜ.ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಶಾಲೆಗಳು ಆರಂಭವಾದ ಜೂನ್ ತಿಂಗಳಲ್ಲೇ ಮೊಟ್ಟೆ ದರ ಕಳೆದ ಹಲವು ವರ್ಷಗಳ ಗರಿಷ್ಠ ಮಟ್ಟ ತಲುಪಿದ್ದು, ಇದು ಗ್ರಾಹಕರ ಜೊತೆಗೆ ಸರಕಾರಿ ಶಾಲೆಗಳ ಮಧ್ಯಾಹ್ನದ ಊಟ ವ್ಯವಸ್ಥೆ ನಿರ್ವಹಿಸುವ ಶಿಕ್ಷಕರಿಗೂ ಹೆಚ್ಚುವರಿ ಹೊರೆ ತಂದಿದೆ.ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಶಾಲೆಗಳಿಗೆ ರಜೆ ಆರಂಭವಾಗುತ್ತಿದ್ದಂತೆ ಬೇಡಿಕೆ ಕುಸಿದು ಮೊಟ್ಟೆ ದರ ಇಳಿಕೆಯಾಗುತ್ತದೆ. ಜೂನ್‌ನಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬರುತ್ತದೆ. ಆದರೆ ಈ ವರ್ಷ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಮೊಟ್ಟೆ ದರ ಏರಿಕೆಯಾಗಿದೆ.ಮೊಟ್ಟೆ ಉತ್ಪಾದನೆ ಕುಸಿತವೇ ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಬೇಸಿಗೆಯ ತೀವ್ರ ಬಿಸಿಲಿನಿಂದ ರಾಜ್ಯದ ಹಲವೆಡೆ ದೊಡ್ಡ ಪ್ರಮಾಣದ ಕೋಳಿ ಫಾರಂಗಳಲ್ಲಿ ಸಾಕಷ್ಟು ಮೊಟ್ಟೆ ಕೋಳಿಗಳು ಮೃತಪಟ್ಟಿದ್ದು, ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ. ಪರಿಣಾಮವಾಗಿ ಮೊಟ್ಟೆಗಳ ಲಭ್ಯತೆ ಕುಸಿದು ದರ ಏರಿಕೆಯಾಗಿದೆ.ಮೇ ತಿಂಗಳಲ್ಲಿ ಡಜನ್ ಮೊಟ್ಟೆಗೆ ₹56 ಇದ್ದ ದರ ಇದೀಗ ₹84ಕ್ಕೆ ತಲುಪಿದೆ. ಇದೇ ವೇಳೆ ಮೊಟ್ಟೆ ಕೋಳಿಗಳ ಮಾರಾಟವನ್ನು ಸಾಕಣೆದಾರರು ಕಡಿಮೆ ಮಾಡಿರುವುದರಿಂದ ಕೋಳಿ ಮಾಂಸದ ದರವೂ ಸಹ ಏರಿಕೆ ಕಂಡಿದೆ.
ರಫ್ತು ಪುನಾರಂಭವೂ ದರ ಏರಿಕೆಗೆ ಕಾರಣ:ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೊಟ್ಟೆ ರಫ್ತು ಇತ್ತೀಚೆಗೆ ಪುನಾರಂಭಗೊಂಡಿದೆ. ಮಧ್ಯ ಪ್ರಾಚ್ಯದ ಯುದ್ಧ ಆರಂಭವಾಗುತ್ತಿದ್ದಂತೆಯೇ ಮೊಟ್ಟೆ ರಫ್ತು ಸ್ಥಗಿತದ ಹಂತಕ್ಕೆ ಬಂದಿತ್ತು. ಇದೀಗ ಯುದ್ಧ ಮುಗಿಯುತ್ತಿದ್ದಂತೆ ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲೂ ಮೊಟ್ಟೆ ಹಾಗೂ ಮೊಟ್ಟೆ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿದ್ದು, ಇದರ ಪರಿಣಾಮವಾಗಿ ದರದಲ್ಲೂ ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.ಯಾಂತ್ರಿಕೃತ ಮೀನುಗಾರಿಕೆಗೆ ಜೂ. 1ರಿಂದ ಜುಲೈ 31ರ ತನಕ ನಿಷೇಧವಿದೆ. ಈ ಹಿನ್ನೆಲೆ ಅಂಕೋಲೆಯ ಮೀನು ಮಾರುಕಟ್ಟೆಯಲ್ಲಿ ಮೀನಿನ ಅಭಾವ ಕಂಡು ಬಂದಿದೆ. ಕೇವಲ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಸಿಕ್ಕ ಮೀನುಗಳನ್ನು ತಂದು ಮೀನು ಮಾರಾಟ ಮಾಡಲಾಗುತ್ತಿದೆ. ಮತ್ಸ್ಯ ಪ್ರಿಯರಿಗೆ ಮೀನು ದೊರೆಕದೇ ಇರುವುದರಿಂದ ಕೋಳಿ ಮೊಟ್ಟೆ ಸವಿಯುವತ್ತ ನಾಗರಿಕರು ಹೆಜ್ಜೆ ಇಡುತ್ತಿರುವುದಿಂದ ಮೊಟ್ಟೆ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.