ಹುಬ್ಬಳ್ಳಿ:ಇಸ್ಲಾಂ ಧರ್ಮದ ಪ್ರವರ್ತಕ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ಈದ್ ಮಿಲಾದ್ ಅಂಗವಾಗಿ ನಗರದಲ್ಲಿ ಮುಸ್ಲಿಂ ಸಮುದಾಯದ ಬಂಧುಗಳು ಅದ್ಧೂರಿ ಮೆರವಣಿಗೆ ನಡೆಸಿದರು. ಇಸ್ಲಾಂಪುರ ರಸ್ತೆಯ ದಾರುಲ್ ಉಲುಮ್ ಅಹಲೆ ಸುನ್ನತ ಗೌಸಿಯಾ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಮುಸ್ಲಿಂ ಧರ್ಮ ಗುರುಗಳು ಹಾಗೂ ಮುಖಂಡರು ಚಾಲನೆ ನೀಡಿದರು. ಅಂಜುಮನ್ ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ ನೇತೃತ್ವ ವಹಿಸಿದ್ದರು.
ಮೆರವಣಿಗೆಯು ಪಿ.ಬಿ. ರಸ್ತೆ, ಬಂಕಾಪುರ ಚೌಕ, ಯಲ್ಲಾಪುರ ಓಣಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ, ಕಾಳಮ್ಮನ ಅಗಸಿ, ಬಮ್ಮಾಪುರ ಚೌಕ್, ಹಳೇ ಹುಬ್ಬಳ್ಳಿ ದುರ್ಗದ ಬೈಲ, ಪೆಂಡಾರಗಲ್ಲಿ ಮೂಲಕ ಮೆರವಣಿಗೆ ಸಾಗಿ ಅಸಾರ ಹೊಂಡದಲ್ಲಿರುವ ಮೊಹಲ್ಲಾ ತಲುಪಿತು. ಮಧ್ಯಾಹ್ನ ಮೂರುರ ವೇಳೆ ಆರಂಭವಾದ ಮೆರವಣಿಗೆ ತಡರಾತ್ರಿ 12ರ ವರೆಗೂ ನಡೆಯಿತು.ನಗರದ ಮಂಟೂರು ರಸ್ತೆ, ಕೇಶ್ವಾಪುರ, ಗಣೇಶಪೇಟೆ, ಯಲ್ಲಾಪುರ ಓಣಿ, ಗೋಪನಕೊಪ್ಪ, ಆನಂದನಗರ, ಬಮ್ಮಾಪುರ ಚೌಕ್ ಸೇರಿದಂತೆ ನಗರದ ವಿವಿಧೆಡೆ ಇರುವ 120 ಮಸೀದಿಗಳಿಂದ ಹೊರಟ ಮೆರವಣಿಗೆ ಆಸಾರಹೊಂಡ ತಲುಪಿತು. ಸಮುದಾಯದ ಮುಖಂಡರು, ಧರ್ಮ ಗುರುಗಳು, ಮಕ್ಕಳು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೊಹಮ್ಮದ್ ಪೈಗಂಬರರ ಜೀವನ ಸಂದೇಶ ಸಾರುವ ಭಕ್ತಿಗೀತೆ, ಶಾಯರಿ ಹಾಡಿದರು. ಕುದುರೆ, ಒಂಟೆ ಮೇಲೆ ಮಕ್ಕಳು ಕುರಿತು ಸವಾರಿ ಮಾಡಿದರು. ಬಿಳಿಯ ನಿಲುವಂಗಿ, ಹೊಸ ಬಟ್ಟೆಹಾಗೂ ಸಾಂಪ್ರದಾಯಿಕ ಪೇಟ ಧರಿಸಿದ್ದ ಸಾವಿರಾರು ಮುಸ್ಲಿಮರು ಹಬ್ಬದ ಸಡಗರದಲ್ಲಿ ಮಿಂದೆದ್ದು, ಕುರಾನ್ ಪಠಣ ಮಾಡುತ್ತ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಹಿಂದೂ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹೂಮಾಲೆ ಹಾಕಿ ಸ್ವಾಗತಿಸುವ ಮೂಲಕ ಭಾವೈಕ್ಯ ಮೆರೆದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಶರಬತ್, ಮಜ್ಜಿಗೆ, ನೀರು, ಹಣ್ಣು, ಸಿಹಿ ತಿನಿಸು ಹಂಚಿದರು.ಈದ್ ಮಿಲಾದ್ ಅಂಗವಾಗಿ ನಗರದಲ್ಲಿರುವ ಎಲ್ಲ ಮಸೀದಿ, ದರ್ಗಾಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಳೇಹುಬ್ಬಳ್ಳಿಯ ಕೆಲವು ಕಟ್ಟಡಗಳ ಮೇಲೆ ಹಸಿರು ಧ್ವಜಗಳು, ಬಂಟಿಂಗ್ಸ್, ಬ್ಯಾನರ್ಸ್, ಹಸಿರು ಬಟ್ಟೆ ತೋರಣಗಳನ್ನು ಕಟ್ಟಿಹಬ್ಬದ ಸಂಭ್ರಮ ಹೆಚ್ಚಿಸಲಾಗಿತ್ತು. ಧರ್ಮಗುರು ತಾಜುದ್ದೀನ್ ಪೀರಾ ಖಾದ್ರಿ, ಶಾಸಕ ಪ್ರಸಾದ ಅಬ್ಬಯ್ಯ, ಐ.ಜಿ. ಸನದಿ, ಯೂಸೂಫ್ ಸವಣೂರು, ಅಲ್ತಾಫ್ ಕಿತ್ತೂರ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಅಬ್ದುಲ್ ವಹಾಬ್ ಮುಲ್ಲಾ, ಆಶ್ರಫ್ ಅಲಿ, ಅನ್ವರ ಮುಧೋಳ, ಶಫಿ ಮುದ್ದೇಬಿಹಾಳ, ಸಿರಾಜ್ ಅಹ್ಮದ್ ಕುಡಚಿವಾಲೆ, ಇಸ್ಮಾಯಿಲ್ ಕಾಲೇಬುಡ್ಡೆ, ಬರ್ಸೀ ಅಹ್ಮದ, ಅಬ್ದುಲ್ ದೇವಗಿರಿ, ಅಬ್ದುಲ್ ಗುಲ್ಬರ್ಗಾ, ಶಾಕೀರ ಸನದಿ, ಸಮದ್ ಜಮಖಾನೆ, ನಜೀರ ಹೊನ್ಯಾಳ, ನವೀದ್ ಮುಲ್ಲಾ ಪಾಲ್ಗೊಂಡಿದ್ದರು. ಬಿಗಿ ಬಂದೋಬಸ್ತ್:
ಮೆರವಣಿಗೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ಇಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಪೊಲೀಸ್ ಅಧಿಕಾರಿಗಳು ಮೆರವಣಿಗೆಯ ಭದ್ರತಾ ಉಸ್ತುವಾರಿ ವಹಿಸಿದ್ದರು. ಕಳೆದ ವರ್ಷದಂತೆ ಈ ವರ್ಷವೂ ಅಂಜುಮನ್ ಸಂಸ್ಥೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸಬಾರದು ಎನ್ನುವ ನಿರ್ಣಯ ಕೈಗೊಂಡಿತ್ತು. ಡಿಜೆ ಬದಲು ಧ್ವನಿ ವರ್ಧಕ (ಮೈಕ್) ಬಳಸಿದ್ದರು. ಅಮನ್ ಫೌಂಡೇಶನ್ ವತಿಯಿಂದ ಪಿ.ಬಿ. ರಸ್ತೆ, ಸ್ಟೇಷನ್ ರಸ್ತೆ ಹಾಗೂ ಇಂಡಿಪಂಪ್ ವೃತ್ತದಲ್ಲಿ ಬಡವರಿಗೆ ಬಟ್ಟೆ ಹಾಗೂ ಆಹಾರದ ಪೊಟ್ಟಣ ವಿತರಿಸಲಾಯಿತು.