ಕನ್ನಡಪ್ರಭ ವಾರ್ತೆ ಬೇಲೂರು
ಬಂಟೆನಹಳ್ಳಿಯಿಂದ ಹೊರಟ ಈದ್ ಮಿಲಾದ್ ಹಬ್ಬದ ಶೋಭಾ ಯಾತ್ರೆ, ನೆಹರು ನಗರ ಬಸವೇಶ್ವರ ವೃತ್ತ ಅಂಬೇಡ್ಕರ್ ಸರ್ಕಲ್‌ನಿಂದ ಜೆಪಿ ನಗರ ತಲುಪಿತು. ಈ ಯಾತ್ರಾ ಸಂದರ್ಭದಲ್ಲಿ ಪುಟ್ಟಪುಟ್ಟ ಮಕ್ಕಳು ಹಾಗೂ ಹಿರಿಯರು ಹೊಸ ಉಡುಪು ಧರಿಸಿ ಹಸಿರು ಧ್ವಜ ಹಿಡಿದುಕೊಂಡ ಭಕ್ತಿ ಗೀತೆ ಹಾಡಿಕೊಂಡು ಹೆಜ್ಜೆ ಹಾಕಿದರು. ವಿಶೇಷವಾಗಿ ಈ ಯಾತ್ರೆಯಲ್ಲಿ ಮೆಕ್ಕ ಮದೀನ ಸ್ತಬ್ಧ ಚಿತ್ರಗಳನ್ನು ರಸ್ತೆಯಲ್ಲಿ ನೆರೆದಿದ್ದ ಸಾರ್ವಜನಿಕರು ನೋಡಿ ಹರ್ಷ ವ್ಯಕ್ತಪಡಿಸಿದರು.
ಬಸವೇಶ್ವರ ವೃತ್ತದಲ್ಲಿ ಶೋಭಾ ಯಾತ್ರೆಯಲ್ಲಿ ಸಾಗುವ ಯಾತ್ರೆಗಳಿಗೆ ಹಿಂದೂ ಬಾಂಧವರು ಸಿಹಿ ಹಂಚಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೋಟೆ ಮಸೀದಿಯ ಗುರುಗಳಾದ ರಿಜ್ವಾನ್, ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿರುತ್ತಾರೆ. ಪ್ರವಾದಿರವರ ಜೀವನ ಚರಿತ್ರೆಯ ಬಗ್ಗೆ ಹೇಳುವುದಾದರೆ ಈ ಲೋಕಕ್ಕೆ ಅವರು ಪದಾರ್ಪಣೆ ಮಾಡುವಕ್ಕಿಂತ ಮುಂಚೆ ಅಂಧಕಾರ ಮೇಲು ಕೇಳು ಕಪ್ಪು ಜನಾಂಗದವರಿಗೆ ಹೀಯಾಳಿಸುವುದು, ಮಹಿಳೆಯರು ಜನಿಸಿದ ತಕ್ಷಣ ಜೀವಂತವಾಗಿ ಹೂಳುವುದು, ವಿಧವೆಯನ್ನು ಅಪಶಕುನ ಎಂದು ಮತ್ತು ಅನೇಕ ಅನಿಷ್ಟ ಪದ್ಧತಿ ಜಾರಿಯಲ್ಲಿದ್ದವು. ಇವನ್ನೆಲ್ಲ ಹೋಗಲಾಡಿಸಿದ ಮಹಾ ನಾಯಕ ಎಂದರು.ನಾಗರೀಕತೆಗೆ ಹೊಸ ರೂಪ ನೀಡಿ ಈ ಮಟ್ಟದಲ್ಲಿ ಪ್ರಗತಿ ಕಾರಣವಾದ ಮತ್ತೊಬ್ಬ ವ್ಯಕ್ತಿ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಪ್ರವಾದಿ ಅವರ ಅನುಯಾಯಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಬೇಲೂರು ಪುರಸಭಾ ಅಧ್ಯಕ್ಷ ಅಶೋಕ್. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮಾಜಿ ಸಚಿವ ಶಿವರಾಂ, ಗ್ರಾ ನೈಟ್ ರಾಜಶೇಖರ್, ಬಳ್ಳೂರು ಸ್ವಾಮಿಗೌಡ, ಗೋವಿನಹಳ್ಳಿ ರವಿ, ಗೆಂಡೆಹಳ್ಳಿ ಚೇತನ್, ರೈತ ಸಂಘದ ಧರ್ಮಪಾಲ್, ವಿವಿಧ ಸಂಘಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿ ಶುಭಹಾರೈಸಿದರು.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಲೋಕೇಶ್, ಸರ್ಕಲ್ ಇನ್ಸ್ಪೆಕ್ಟರ್ ಜಯಪ್ರಕಾಶ್, ಸಬ್ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.