ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿ । ಸಂಘಟನೆಗಳ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳ ಸಂಧಾನ
ಚಿಕ್ಕಮಗಳೂರಿನ ಟಿಪ್ಪುನಗರದಲ್ಲಿ ಈದ್-ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಬ್ಯಾನರ್‌ಗೆ ಪಾಕಿಸ್ತಾನದ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳು ಕೆರಳಿ ಈದ್ ಮಿಲಾದ್ ದಿನವೇ ಪ್ರತಿಭಟನೆ ರ್‍ಯಾಲಿ ನಡೆಸಲು ಮುಂದಾಗಿರುವುದು ತೀವ್ರ ಆತಂಕಕ್ಕೀಡು ಮಾಡಿದೆ.
ಈದ್ ಮಿಲಾದ್ ಹಬ್ಬದ ದಿನ ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಸಮುದಾಯದವರು ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದೇ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಇದರಿಂದ ನಗರದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.ಸಂಧಾನ ಕಸರತ್ತು: ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಪ್ರತಿಭಟನೆ ಹಮ್ಮಿಕೊಂಡ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಂಗಳವಾರ ಸಂಧಾನ ಸಭೆ ನಡೆಸಿದ್ದಾರೆ. ಇದರೊಂದಿಗೆ ಪೊಲೀಸರು ಈದ್ ಮಿಲಾದ್ ಮೆರವಣಿಗೆಗೆ ಹೆಚ್ಚಿನ ಪ್ರಮಾಣದ ಭದ್ರತೆ ಕೈಗೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನು ಬುಧವಾರ ಭದ್ರತೆಗೆ 300 ಗೃಹ ರಕ್ಷಕ ದಳ, 4 ಕೆಎಸ್‌ಆರ್‌ಪಿ ತುಕಡಿ, ಜಿಲ್ಲಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಮತ್ತಷ್ಟು ಪೊಲೀಸ್ ಭದ್ರತೆ ಹೆಚ್ಚಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಟಿಪ್ಪು ಕಟೌಟ್‌ಗೆ ಪಾಕ್ ಹಾಡು: ಪ್ರಮುಖ ಆರೋಪಿ ಬಂಧನನಗರದ ಟಿಪ್ಪು ನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್‌ಗೆ ವೈರಿ ರಾಷ್ಟ್ರದ ಪರವಾದ ಹಾಡು ಅಳವಡಿಸಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಟಿಪ್ಪು ನಗರದ ನಿವಾಸಿ ಅಫ್ರಿನ್ (23) ಬಂಧಿತ ಆರೋಪಿ. ಕಾರು ಶೋರೂಮ್‌ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಫ್ರಿನ್, ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಬಳಸುತ್ತಿದ್ದ ಎನ್ನಲಾಗಿದ್ದು, ಇದೇ ಖಾತೆ ಯಲ್ಲಿ ವಿವಾದಿತ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪ ಎದುರಾಗಿದೆ.ಪ್ರಕರಣದ ತನಿಖೆ ಚುರುಕುಗೊಳಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಅಫ್ರಿನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ರೋಷನ್ ಹಾಗೂ ಅಫ್ರಿನ್ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.ವಿವಾದಿತ ವಿಡಿಯೋವನ್ನು ಸಿದ್ಧಪಡಿಸುವುದು, ಅಪ್‌ಲೋಡ್ ಮಾಡುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಳ್ಳುವಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋ ಶೇರ್ ಮಾಡಿರುವವರು ಹಾಗೂ ಸ್ಟೇಟಸ್ ಹಾಕಿಕೊಂಡವರ ಮೇಲೂ ತನಿಖೆ ತೂಗುಗತ್ತಿ ಬಿದ್ದಿದೆ.ಟಿಪ್ಪು ಸುಲ್ತಾನ್ ಕಟೌಟ್‌ಗೆ ಸಂಬಂಧಿಸಿದಂತೆ ವೈರಿ ರಾಷ್ಟ್ರದ ಪರವಾದ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಇದೀಗ ಮತ್ತಷ್ಟು ತಿರುವು ಪಡೆದಿದೆ. ಪ್ರಕರಣದ ಹಿಂದಿರುವ ಸಂಪೂರ್ಣ ಜಾಲ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಇಂದು ‘ಚಿಕ್ಕಮಗಳೂರು ಚಲೋ’
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶವಿರೋಧಿ ಹಾಗೂ ಸಮಾಜಘಾತುಕ ಕೃತ್ಯಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಖಂಡಿಸಿ ಆ.26 ರಂದು ಚಿಕ್ಕ ಮಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಶೃಂಗೇರಿ, ಕೊಪ್ಪ, ತರೀಕೆರೆ ಹಾಗೂ ಕಳಸದಿಂದ ಬೆಳಗ್ಗೆ 9 ಗಂಟೆಗೆ ಪ್ರತಿಭಟನಾಕಾರರು ಹೊರಟು, ಕಡೂರು ಮತ್ತು ಮೂಡಿಗೆರೆ ಮೂಲಕ ಮಧ್ಯಾಹ್ನ 12 ಗಂಟೆಗೆ ಚಿಕ್ಕಮಗಳೂರು ನಗರ ತಲುಪಲಿದ್ದಾರೆ. ಬಳಿಕ ನಗರದ ತಾಲೂಕು ಕಚೇರಿ ಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ತ್ರಿವರ್ಣ ಧ್ವಜಗಳೊಂದಿಗೆ ಮೆರವಣಿಗೆ ನಡೆಯಲಿದೆ. ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ರಾಷ್ಟ್ರಭಕ್ತರ ಸಭೆ ನಡೆಯಲಿದೆ ಎಂದು ಹೇಳಿದರು.ಯಾವುದೇ ಜಾತಿ, ಭಾಷೆ, ಪಕ್ಷ ಅಥವಾ ಧರ್ಮದ ಭೇದವಿಲ್ಲದೆ ಎಲ್ಲಾ ಭಾರತೀಯರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಹಿಂದೂ ಹಿತರಕ್ಷಣಾ ವೇದಿಕೆ ಮನವಿ ಮಾಡಿದರು.
--- ಬಾಕ್ಸ್--
ಪಾಕಿಸ್ತಾನಕ್ಕೆ ಸಂಬಂಧಿಸಿದ ಹಾಡು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕೃತ್ಯವನ್ನು ಕೇವಲ ಕಿಡಿಗೇಡಿಗಳ ಕೃತ್ಯ ಎಂದು ಪರಿಗಣಿಸದೆ ಸಮಗ್ರ ತನಿಖೆ ನಡೆಸಬೇಕು. ಒಬ್ಬರು ಹಾಕಿದ ಪೋಸ್ಟ್ ಅನ್ನು ಹಲವು ಮಂದಿ ಹಂಚಿಕೊಂಡಿದ್ದು, ಲೈಕ್ ಮಾಡಿರುವುದರಿಂದ ಅವರ ಪಾತ್ರದ ಬಗ್ಗೆತನಿಖೆ ನಡೆಸಬೇಕು.ಹಾಡನ್ನು ಕಳಿಸಿದ ವ್ಯಕ್ತಿ ಮಂಗಳೂರು ಮೂಲದವರು ಎಂಬ ಮಾಹಿತಿ ಕೇಳಿಬರುತ್ತಿದ್ದು, ಇದರ ಸತ್ಯಾಸತ್ಯತೆಯನ್ನೂ ತನಿಖೆ ಮೂಲಕ ಪತ್ತೆಹಚ್ಚಬೇಕು. ಪ್ರಕರಣದ ಹಿಂದೆ ಯಾವುದೇ ವ್ಯವಸ್ಥಿತ ಜಾಲವಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪರಿಶೀಲಿಸಬೇಕಿದೆ ಎಂದು ಆಗ್ರಹ ಕೇಳಿ ಬಂದಿದೆ.