ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರೂಕ್ ಸ್ಪಷ್ಟನೆ । ಸೈಟ್ ಅನಧಿಕೃತವಾಗಿದ್ದರೆ, ಕಾನೂನು ಕ್ರಮ ಕೈಗೊಳ್ಳಿ
ಮುಡುಗೋಡು ಗ್ರಾಪಂ ಸಂತೆ ಮೈದಾನ ಜಾಗ ವಿಚಾರದಲ್ಲಿ ಶಾಸಕರ ಹಿಂಬಾಲಕರು ಖಾತೆ ಮಾಡಿಸಿ ಲಕ್ಷಾಂತರ ರು. ಹೊಡೆದಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾಡಿರುವ ಅರೋಪ ಸತ್ಯಕ್ಕೆ ದೂರವಾಗಿದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಪಾರೂಕ್ ಹೇಳಿದ್ದಾರೆ.
ಮಂಗಳವಾರ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ನಿವೇಶನದಲ್ಲಿ 50-60 ವರ್ಷಗಳಿಂದ ವಾಸವಾಗಿದ್ದು 94-ಸಿ.ನಲ್ಲಿ ಹಕ್ಕು ಪತ್ರ ಪಡೆದಿದ್ದಾರೆ. ಅಕ್ರಮ ನಡೆದಿದ್ದರೆ ನಿವೇಶನ ಅನಧಿಕೃತವಾಗಿದ್ದರೆ, ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಗುಟ್ಕಾ ನಿಷೇಧ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇನ್ನು ಕೇಂದ್ರವೇ ಅಡಕೆ ನಿಷೇಧ ಮಾಡಲು ಹೊರಟಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಶಾಸಕ ಡಿ.ಎಸ್. ಸುರೇಶ್ ಮೊದಲು ಅದನ್ನು ನಿಲ್ಲಿಸಲಿ ಎಂದರು.ಸಚಿವ ನಾಗೇಂದ್ರ ತಪ್ಪಿತಸ್ಥರು ಎಂದು ತೀರ್ಮಾನವಾದರೆ ರಾಜೀನಾಮೆ ಕೊಡುತ್ತಾರೆ. ಪಿಂಚಣಿದಾರರಿಗೆ ಈಗ ಏನೂ ಸಮಸ್ಯೆ ಇಲ್ಲ ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.
ಎರಡು ವರ್ಷದಿಂದ ಪಟ್ಟಣದ ಬಿ.ಎಚ್.ರಸ್ತೆ ಕಾಮಗಾರಿ ನಡೆಯುತ್ತಿದೆ. ಕೇಂದ್ರದ ₹4. 34 ಕೋಟಿಯಲ್ಲಿ ಬೈಪಾಸ್ ನಿಂದ ಹಳೆಯೂರು ತನಕ ನಡೆದ ರಸ್ತೆ ಕಾಮಗಾರಿ ಸ್ವಲ್ಪ ಹಾಳಾಗಿದೆ. ಇದಕ್ಕೆ ಅಧಿಕಾರಿಗಳು ಕಾರಣ, ಇದನ್ನು ಕೂಡಲೇ ಸರಿಪಡಿಸುವಂತೆ ಶಾಸಕ ಜಿ.ಎಚ್. ಶ್ರೀನಿವಾಸ್ ಸೂಚಿಸಿದ್ದಾರೆ.
ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಕುಟುಂಬದವರು ಬಂದರೆ ಅದನ್ನು ಮಾಜಿ ಶಾಸಕರು ಕೇಳುವ ಪ್ರಶ್ನೆ ಅಲ್ಲ. ಅದು ನಮ್ಮ ಪಕ್ಷದವರಿಗೆ ಸಂಬಂಧಿಸಿದ್ದು ನೀವೇಕೆ ಕೇಳುತ್ತೀರಿ, ಇದು ನಿಮಗೆ ಶೋಭೆ ತರುವಂತದ್ದಲ್ಲ. ಇದನ್ನು ನಿಲ್ಲಿಸಬೇಕು, ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಸಕ್ಕರೆ ದರ ಹೆಚ್ಚಾಗಿದೆ ಮಾಜಿ ಶಾಸಕರು ಅದರ ಕಡೆಗೆ ಗಮನ ನೀಡಲಿ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ, ಷರೀಪ್, ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪರ್ವಿನ್ ತಾಜ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಕಾಂಗ್ರೆಸ್ ಸಮಿತಿ ಕಿಸಾನ್ ಸೆಲ್ ಅಧ್ಯಕ್ಷ ಗಿರೀಶ್, ಕಾಂಗ್ರೆಸ್ ಸಮಿತಿ ಎಸ್.ಸಿ.ಸೆಲ್ ಅಧ್ಯಕ್ಷ ಬಿ.ಜಿ.ಗೌರೀಶ್ ಮತ್ತಿತರರು ಭಾಗವಹಿಸಿದ್ದರು.
25ಕೆಟಿಅರ್.ಕೆ.1ಃ ಹೆಚ್.ಯು. ಫಾರೂಕ್