ಪಾರದರ್ಶಕ ಆಡಳಿತ ನೀಡುವತ್ತ ಸಂಘಗಳು ಹೆಚ್ಚು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ
ಕನ್ನಡಪ್ರಭ ವಾರ್ತೆ ಶಿರಾ
ಹಾಲು ಉತ್ಪಾದಕರ ಸಂಘಗಳ ಆರ್ಥಿಕ ಪ್ರಗತಿಗೆ ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ, ಗುಣಮಟ್ಟದ ಹಾಲು ಡೇರಿಗೆ ಹಾಕುವ ಮೂಲಕ ಉತ್ಪಾದಕರು ಆರ್ಥಿಕವಾಗಿ ಸಬಲರಾಗಬೇಕು. ಪಾರದರ್ಶಕ ಆಡಳಿತ ನೀಡುವತ್ತ ಸಂಘಗಳು ಹೆಚ್ಚು ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.ಅವರು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಮಳೆಯ ಅಭಾವ ರೈತ ವ್ಯವಸಾಯದಿಂದ ವಿಮುಖನಾಗುತ್ತಿದ್ದು ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಮಳೆಯ ಕೊರತೆಯಿಂದ ಮೇವಿನ ಅಭಾವ ಸೃಷ್ಟಿಯಾಗಬಹುದು ಹೈನುಗಾರರು ರಾಸುಗಳಿಗೆ ಬೇಕಾಗುವಷ್ಟು ಮೇವನ್ನು ಸಂಗ್ರಹಣೆ ಮಾಡಿಟ್ಟುಕೊಳ್ಳಬೇಕು ಎಂದರು.
ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್ ಮಾತನಾಡಿ ೨೦೧೩ರ ನಂತರ ಒಕ್ಕೂಟದ ನಿರ್ದೇಶಕರಾದ ಎಸ್. ಆರ್.ಗೌಡರವರ ಪ್ರಾಮಾಣಿಕ ಸೇವೆಯಿಂದ ಹಾಲು ಉತ್ಪಾದಕ ಕುಟುಂಬಗಳಿಗೆ ಹೆಚ್ಚು ಸೌಲಭ್ಯ ಲಭಿಸುವಂತಾಗಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಎಂಜಿನಿಯರಿಂಗ್, ಪದವಿ, ಎಂಬಿಬಿಎಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸುಸರ್ಜಿತ ಹಾಸ್ಟೆಲ್ ಸೌಲಭ್ಯ, ರಾಸುಗಳ ವಿಮೆ ಸೇರಿದಂತೆ ಉತ್ಪಾದಕರಿಗೆ ಹೆಚ್ಚು ಹೆಚ್ಚು ಸೌಲಭ್ಯ ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದು, ತಾಲೂಕಿನಲ್ಲಿ ಕ್ಷೀರ ಕ್ರಾಂತಿಯೇ ನಡೆದಿದೆ ಎಂದರು.ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್. ವಿ.ಈಶ್ವರಪ್ಪ, ಉಪಾಧ್ಯಕ್ಷ ಕಮಲಮ್ಮ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಸಮಾಲೋಚಕ ಬಾಬಾ ಫಕ್ರುದ್ದೀನ್ ಪಿ.ಎಂ, ಪ್ರವೀಣ್, ಮುಖಂಡ ಹೊಸೂರು ರಾಜಣ್ಣ, ಮುದ್ದು ಗಣೇಶ್, ಹಾಲು ಉತ್ಪಾದಕರ ಸಂಘದ ಸದಸ್ಯರಾದ ಹೆಚ್. ಎನ್. ನರಸಿಂಹರಾಜು, ಪ್ರಸನ್ನ ಕುಮಾರ್, ಟಿ. ಚಿದಾನಂದ, ಎನ್. ನರಸಿಂಹರಾಜು, ಎಂ.ವಿ. ನಾಗರಾಜು, ಕೃಷ್ಣಮೂರ್ತಿ, ಜಿ.ಶಿವಣ್ಣ, ವೀರನಾಯ್ಕ, ಕಾರ್ಯದರ್ಶಿ ಸಣ್ಣ ಹನುಮಂತೇಗೌಡ ಸೇರಿದಂತೆ ಹಾಲು ಉತ್ಪಾದಕರ ಸಂಘದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.