ರೇಣುಕಾ ಸಾವು ಪ್ರಕರಣ : ಶಂಕಿತರಿಗೆ ಸುಳ್ಳು ಪತ್ತೆ ಪರೀಕ್ಷೆ

KannadaprabhaNewsNetwork |  
Published : Aug 26, 2026, 01:15 AM IST
 ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ರೇಣುಕಾಳಿಗಾಗಿ ನಡೆದಿದ್ದ ಶೋಧಕಾರ್ಯ (ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರ ಕ್ಯಾಂಪ್‌ ಬಳಿ ಜು.31 ರಂದು ನಡೆದಿದೆ ಎನ್ನಲಾದ "ಬೈಕ್‌ ಸ್ಕಿಡ್‌ " ಅಪಘಾತದಲ್ಲಿ ಮಂಜಲಾಪುರ ಗ್ರಾಮದ 19 ವರ್ಷದ ನವ ವಿವಾಹಿತೆ ರೇಣುಕಾ ಸಾವು ಪ್ರಕರಣ ಬಗ್ಗೆ ಶಂಕೆಗಳು ವ್ಯಕ್ತವಾಗಿದ್ದರಿಂದ, ಶಂಕಿತರಿಗೆ "ಸುಳ್ಳು ಪತ್ತೆ ಪರೀಕ್ಷೆ " ನಡೆಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರ ಕ್ಯಾಂಪ್‌ ಬಳಿ ಜು.31 ರಂದು ನಡೆದಿದೆ ಎನ್ನಲಾದ "ಬೈಕ್‌ ಸ್ಕಿಡ್‌ " ಅಪಘಾತದಲ್ಲಿ ಮಂಜಲಾಪುರ ಗ್ರಾಮದ 19 ವರ್ಷದ ನವ ವಿವಾಹಿತೆ ರೇಣುಕಾ ಸಾವು ಪ್ರಕರಣ ಬಗ್ಗೆ ಶಂಕೆಗಳು ವ್ಯಕ್ತವಾಗಿದ್ದರಿಂದ, ಶಂಕಿತರಿಗೆ "ಸುಳ್ಳು ಪತ್ತೆ ಪರೀಕ್ಷೆ " ನಡೆಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ರೇಣುಕಾಳನ್ನು ಕೊಲೆ ಮಾಡಿ, ಅಪಘಾತದ ಕಟ್ಟು ಕತೆ ಕಟ್ಟಲಾಗಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದರಿಂದ ಜತೆಗೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅಲ್ಲಿನ ಕೆಲವರು ನೀಡಿದ ಗೌಪ್ಯ ಮಾಹಿತಿಗಳಿಂದಾಗಿ ಶಂಕೆಗಳು ವ್ಯಕ್ತವಾಗಿದ್ದವು. ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಂದ ನಂತರ, ಅದರನ್ವಯ ಶಂಕಿತರ ಸುಳ್ಳು ಪತ್ತೆ ಪರೀಕ್ಷೆಗೆ ಇಲಾಖೆ ಮುಂದಾಗಲಿದೆ.

ಘಟನೆ ಹಿನ್ನೆಲೆ: ಜಾತ್ರೆಗೆಂದು 15 ದಿನಗಳ ಹಿಂದೆ ತವರಿಗೆಂದು ಹೋಗಿದ್ದ ರೇಣುಕಾ, ನಂತರದಲ್ಲಿ ಪತಿ ಕರೆಪ್ಪ ಜತೆ ಬೈಕ್‌ನಲ್ಲಿ ಪತ್ತೇಪೂರ ಗ್ರಾಮಕ್ಕೆ ತೆರಳುತ್ತಿದ್ದಾಗ, ಸಾಯಿನಗರ ಕ್ಯಾಂಪ್‌ನ ಗೇಟ್‌ ಬಳಿಯ ತಿರುವಿನಲ್ಲಿ ಬೈಕ್‌ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. ಈ ವೇಳೆ, ಪತಿ ಕರೆಪ್ಪ ಮೇಲೆ ಈಜಾಡಿ ಬಂದು ಜೀವ ಉಳಿಸಿಕೊಂಡರೆ, ಹರಿವ ನೀರಿನ ರಭಸಕ್ಕೆ ಬೈಕ್‌ ಸಮೇತ ರೇಣುಕಾ ಕೊಚ್ಚಿ ಹೋಗಿದ್ದಳು. ಆ.2 ರಂದು ಆಕೆಯ ಶವ ಗುತ್ತಿ ಬಸವಣ್ಣ ಏತ ನೀರಾವರಿ ಜಾಕ್ವೆಲ್‌ ಬಳಿ ಸಿಕ್ಕಿತ್ತು ಎಂದು ದೂರು ದಾಖಲಿಸಲಾಗಿತ್ತು. ಆದರೆ, ಈ ಸಾವು ಅಪಘಾತದಿಂದಲ್ಲ ಎಂಬ ಸಾರ್ವಜನಿಕ ವಲಯದಲ್ಲಿನ ಸಂಶಯಗಳ ಜೊತೆಗೆ, ಸಾಮಾಜಿಕ ಸುದ್ದಿ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ರೇಣುಕಾ ಸಾವು ಪ್ರಕರಣದಲ್ಲಿ ಶಂಕೆಗಳು ವ್ಯಕ್ತವಾಗಿದ್ದರಿಂದ, ಸತ್ಯಾಸತ್ಯತೆ ಅರಿಯಲು ಎಫ್‌ಎಸ್‌ಎಲ್‌ ವರದಿ ಬಂದ ನಂತರ, ಅದರನ್ವಯ "ಸುಳ್ಳು ಪತ್ತೆ ಪರೀಕ್ಷೆ " ನಡೆಸಲಾಗುತ್ತದೆ. ಇಲಾಖೆ ಈ ಬಗ್ಗೆ ಗಂಭೀರವಾದ ತನಿಖೆ ನಡೆಸುತ್ತದೆ ಎಂದು ಯಾದಗಿರಿ ಎಸ್ಪಿ ಪೃಥ್ವಿಕ್‌ ಶಂಕರ್‌ ತಿಳಿಸಿದ್ದಾರೆ.

ಏನಿದು ಸುಳ್ಳು ಪತ್ತೆ ಪರೀಕ್ಷೆ: ವ್ಯಕ್ತಿಯು ನಿಜ ಹೇಳುತ್ತಿದ್ದಾನೆಯೇ ಅಥವಾ ಸುಳ್ಳು ಹೇಳುತ್ತಿದ್ದಾನೆಯೇ ಎಂಬುದನ್ನು ಕಂಡು ಹಿಡಿಯುವ ವೈಜ್ಞಾನಿಕ ಪರೀಕ್ಷೆ ಇದಾಗಿದೆ. ಪ್ರಶ್ನೆಗಳನ್ನು ಕೇಳುವಾಗ ವ್ಯಕ್ತಿಯ ರಕ್ತದೊತ್ತಡ, ನಾಡಿಮಿಡಿತ, ಉಸಿರಾಟದ ಗತಿ ಮತ್ತು ಚರ್ಮದ ವರ್ತನೆ ಮುಂತಾದ ದೈಹಿಕ ಬದಲಾವಣೆಗಳನ್ನು ಇದು ಅಳೆದು ದಾಖಲಿಸುತ್ತದೆ. ಅಪರಾಧ ತನಿಖೆಗಳಲ್ಲಿ ಆರೋಪಿಗಳು ಅಥವಾ ಸಾಕ್ಷಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ಇದನ್ನು ಬಳಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸ್‌ ಕಂಪನಿ ಖರೀದಿಗೆ ಸಿಎಂ ಯತ್ನ: ಎಚ್‌ಡಿಕೆ!
ಮನೆ ಬಳಿ ವಾಹನ ಪಾರ್ಕಿಂಗ್‌ ಶುಲ್ಕ ಪುನರ್‌ ಪರಿಶೀಲಿಸಿ: ರೆಡ್ಡಿ