ಕನ್ನಡಪ್ರಭ ವಾರ್ತೆ ಮೈಸೂರು
ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382 ಪರಿತ್ಯಕ್ತ/ ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಸದರಿ ವಾಹನಗಳ ಮೇಲೆ ನೋಟಿಸ್ ಅಂಟಿಸುವ ಕಾರ್ಯಕ್ಕೆ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವುದರೊಂದಿಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಅಲ್ಲದೆ, ಕೆಲವು ವಾಹನಗಳು ತ್ಯಾಜ್ಯ ಸಂಗ್ರಹಣೆ, ಅಕ್ರಮ ಚಟುವಟಿಕೆ ಹಾಗೂ ಸೊಳ್ಳೆ ಸೇರಿದಂತೆ ರೋಗವಾಹಕಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದರು.ಹೀಗಾಗ, ನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಸಂಬಂಧಪಟ್ಟ ವಾಹನದ ಮಾಲೀಕರು ತಮ್ಮ ವಾಹನವನ್ನು ಸದರಿ ಸ್ಥಳದಿಂದ ತೆರವುಗೊಳಿಸಬೇಕು. ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದಲ್ಲಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 127 ಹಾಗೂ ಮೈಸೂರು ಮಹಾನಗರ ಪಾಲಿಕೆಯ ಉಪವಿಧಿಗಳು ಮತ್ತು ಪಾಲಿಕೆ ಪರಿಷತ್ತಿನ ನಿರ್ಣಯದನ್ವಯ, ವಾಹನವನ್ನು ಪರಿತ್ಯಕ್ತ/ ಅನುಪಯುಕ್ತ ವಾಹನವೆಂದು ಪರಿಗಣಿಸಿ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು. ವಾಹನ ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ವಾಹನವನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡುವ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.