ಹಳೆ ಜಿಲ್ಲಾಸ್ಪತ್ರೆ ಕಟ್ಟಡ ಕರ್ನಾಟಕ ಪಬ್ಲಿಕ್ ಸ್ಕೂಲಾಗಿ ಪರಿವರ್ತನೆ

KannadaprabhaNewsNetwork |  
Published : Aug 26, 2026, 01:15 AM IST
25ಕೆಆರ್ ಎಂಎನ್ 5.ಜೆಪಿಜಿಶಾಸಕ ಇಕ್ಬಾಲ್ ಹುಸೇನ್ ರವರು ಅಧಿಕಾರಿಗಳೊಂದಿಗೆ ಹಳೆ ಜಿಲ್ಲಾಸ್ಪತ್ರೆ ಕಟ್ಟಡ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಮಂಗಳವಾರ ಸಂಜೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ,ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಹಾಗೂ ನಗರಸಭೆ ಆಯುಕ್ತ ಜಯಣ್ಣ ಅವರೊಂದಿಗೆ ಕಟ್ಟಡದ ಸ್ಥಿತಿಗತಿ ವೀಕ್ಷಣೆ ಮಾಡಿದರು.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಮೋತಿನಗರ ಬಡಾವಣೆಯಲ್ಲಿದ್ದ ಜಿಲ್ಲಾಸ್ಪತ್ರೆ ಹಳೆ ಬೆಂಗಳೂರು - ಮೈಸೂರು ಹೆದ್ದಾರಿ ಬದಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಹೈಟೆಕ್ ಜಿಲ್ಲಾಸ್ಪತ್ರೆಯಾಗಿ ರೂಪುಗೊಂಡಿತು.

ಅಂದಿನಿಂದ ಇಲ್ಲಿವರೆಗೂ ಹಳೆ ಜಿಲ್ಲಾಸ್ಪತ್ರೆ ಕಟ್ಟಡ ಪಾಳು ಬಿದ್ದು ಭೂತ ಬಂಗಲೆಯಂತಾಗಿದ್ದು, ಇಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸುವ ಮೂಲಕ ಕಟ್ಟಡಕ್ಕೆ ಕಾಯಕಲ್ಪ ನೀಡಲು ಶಾಸಕ ಇಕ್ಬಾಲ್ ಹುಸೇನ್ ರವರು ಚಿಂತನೆ ನಡೆಸಿದ್ದಾರೆ.

ಈ ಮೊದಲು ಹಳೆ ಜಿಲ್ಲಾಸ್ಪತ್ರೆಯನ್ನು ತಾಯಿ - ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಚರ್ಚೆಗಳು ನಡೆದಿದ್ದವು. ಅದನ್ನು ಹೈಟೆಕ್ ಜಿಲ್ಲಾಸ್ಪತ್ರೆ ಪಕ್ಕದಲ್ಲಿಯೇ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಹಳೆ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಒಂದು ಕೆಪಿಎಸ್ ಶಾಲೆ ಪ್ರಾರಂಭಿಸಲು ಕನಿಷ್ಠ 5 ಎಕರೆ ಜಾಗ ಹಾಗೂ ₹45 ಕೋಟಿ ಅನುದಾನ ಬೇಕಾಗುತ್ತದೆ. ನಗರದ ಮಧ್ಯ ಭಾಗದಲ್ಲಿ ಇಷ್ಟೊಂದು ಜಾಗ ಸಿಗುವುದು ಕಷ್ಟಸಾಧ್ಯ. ಹಳೆ ಜಿಲ್ಲಾಸ್ಪತ್ರೆ ಜಾಗ 2 ಎಕರೆ 21 ಗುಂಟೆ ಇದ್ದು, ತರಗತಿಗಳಿಗೆ ಅಗತ್ಯವಾದಷ್ಟು ಕೊಠಡಿಗಳು, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಇದೆ.

ಹೀಗಾಗಿ ಹಳೆ ಜಿಲ್ಲಾಸ್ಪತ್ರೆ ಕಟ್ಟಡವನ್ನೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಗಿ ಬಳಕೆ ಮಾಡಿಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಾಸಕ ಇಕ್ಬಾಲ್ ಹುಸೇನ್ ರವರು ಸಮಾಲೋಚನೆ ನಡೆಸಿದ್ದು, ಪತ್ರ ವ್ಯವಹಾರ ನಡೆದಿದೆ.

ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಮಂಗಳವಾರ ಸಂಜೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ್ , ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ,ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಹಾಗೂ ನಗರಸಭೆ ಆಯುಕ್ತ ಜಯಣ್ಣ ಅವರೊಂದಿಗೆ ಕಟ್ಟಡದ ಸ್ಥಿತಿಗತಿ ವೀಕ್ಷಣೆ ಮಾಡಿದರು.

ಕಟ್ಟಡದಲ್ಲಿನ ಪ್ರತಿಯೊಂದು ಕೊಠಡಿಯನ್ನು ವೀಕ್ಷಣೆ ಮಾಡಿದ ಶಾಸಕರು, ನಿರುಪಯುಕ್ತ ವೈದ್ಯಕೀಯ ಉಪಕರಣಗಳು, ರೋಗಿಗಳ ಹಾಸಿಗೆ, ಅವಧಿ ಮೀರಿದ ಔಷಧಿಗಳು ಹಾಗೂ ಕಟ್ಟಡದ ಆವರಣದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಳೆ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಬೇಕಾಗಿರುವುದರಿಂದ ಕಟ್ಟಡವನ್ನು ಆಧುನಿಕತೆಗೆ ತಕ್ಕಂತೆ ನವೀಕರಣ ಮಾಡಬೇಕು. ಇದಕ್ಕೆ ಎಷ್ಟು ವೆಚ್ಚ ತಗಲುತ್ತದೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ರವರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ಸೂಚನೆ ನೀಡಿದರು.

ಕಳೆದ 30 ವರ್ಷ ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಜನರಿಗೆ ಆರೋಗ್ಯ ಸೇವೆ ಒದಗಿಸಿದ ಕಟ್ಟಡ ಇದೀಗ ಮಕ್ಕಳಿಗೆ ಅಕ್ಷರ ಜ್ಞಾನ ನೀಡಲು ಸಿದ್ಧಗೊಳ್ಳುತ್ತಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಹಳೆ ಜಿಲ್ಲಾಸ್ಪತ್ರೆ ಕಟ್ಟಡ ಸೂಕ್ತವಾಗಿದೆ. ಕಟ್ಟಡ ಸುಸ್ಥಿತಿಯಲ್ಲಿದ್ದು, ಕೆಲವಡೆ ಬಾಗಿಲು, ಕಿಟಕಿಗಳು ಮುರಿದಿವೆ. ಅದೆಲ್ಲವನ್ನು ದುರಸ್ಥಿ ಪಡಿಸಿ ಸುಣ್ಣಬಣ್ಣ ಬಳಿದು ಆಧುನಿಕತೆಗೆ ತಕ್ಕಂತೆ ನವೀಕರಣಗೊಳಿಸಲಾಗುವುದು. ಶೀಘ್ರದಲ್ಲಿಯೇ ಎಲ್ಲ ದಾಖಲೆಗಳು ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಳ್ಳಲಿವೆ.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

----

30 ವರ್ಷಗಳ ಕಾಲ ಆಸ್ಪತ್ರೆ ಸೇವೆ

ಹಳೆ ಜಿಲ್ಲಾಸ್ಪತ್ರೆ ಕಟ್ಟಡ ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರ ತಾಲೂಕು ಸಾರ್ವಜನಿಕ ಆಸ್ಪತ್ರೆಯಾಗಿ, ನಂತರ ಜಿಲ್ಲಾಸ್ಪತ್ರೆಯಾಗಿ ಸುಮಾರು 30 ವರ್ಷಗಳ ಕಾಲ ಎಲ್ಲ ಜನರಿಗೂ ಚಿಕಿತ್ಸೆ ನೀಡಿತ್ತು.

1978ರಲ್ಲಿ ರಾಮನಗರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎ.ಕೆ.ಅಬ್ದುಲ್ ಸಮದ್ ರವರು ಮೊದಲ ಬಾರಿಯೇ ಆರೋಗ್ಯ ಸಚಿವರಾಗಿದ್ದರು. 1981ರಲ್ಲಿ ರಾಮನಗರಕ್ಕೆ ಸಾರ್ವಜನಿಕ ಆಸ್ಪತ್ರೆ ತಂದಿದ್ದರು. ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ರವರು ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.

1993ರಲ್ಲಿ ವೀರಪ್ಪ ಮೋಯಿಲಿ ಮುಖ್ಯಮಂತ್ರಿ ಆಗಿದ್ದಾಗ ಸಾರ್ವಜನಿಕ ಆಸ್ಪತ್ರೆ ಲೋಕಾರ್ಪಣೆಗೊಂಡಿತು. ಅಂದು ಕೇಂದ್ರ ಸಚಿವರಾಗಿದ್ದ ಎಂ.ವಿ.ಚಂದ್ರಶೇಖರ್ ಮೂರ್ತಿ, ಸಿ.ಕೆ.ಜಾಫರ್ ಷರೀಫ್ ಹಾಗೂ ಅಂದಿನ ಶಾಸಕ ಸಿ.ಎಂ.ಲಿಂಗಪ್ಪರವರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ವರ್ಷದಿಂದ ಬಿಲ್‌ ಆಗಿಲ್ಲ: ಅಸಮಧಾನ
ಸಂಘಗಳ ಆರ್ಥಿಕ ಪ್ರಗತಿಗೆ ಸದಸ್ಯರು ಸಹಕರಿಸಿ