ಬೀದರ್‌ ಜಿಲ್ಲೆಯಾದ್ಯಂತ ಸಂಭ್ರಮದ ಈದ್‌ ಉಲ್‌ ಫಿತರ್‌

KannadaprabhaNewsNetwork |  
Published : Apr 01, 2025, 12:46 AM IST
ಚಿತ್ರ 31ಬಿಡಿಆರ್‌1ಕಮಲನಗರ ಈದ್ಗಾ ಮೈದಾನದಲ್ಲಿ ಈದ್‌ ಉಲ್‌ ಫಿತರ್‌ ನಿಮಿತ್ತ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಿದರು. | Kannada Prabha

ಸಾರಾಂಶ

ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶಾಂತಿ ಸೌಹಾರ್ದತೆಯ ಸ್ಥಾಪನೆಗಾಗಿ ಪ್ರಾರ್ಥಿಸಿದರು. ರಾಜ್ಯದ ಪೌರಾಡಳಿತ ಸಚಿವ ರಹೀಮ್‌ಖಾನ್‌ ಸೇರಿದಂತೆ ಅನೇಕರು ಸಾಮೂಹಿಪ್ರಾರ್ಥನೆ ಸಲ್ಲಿಸಿದರಲ್ಲದೆ ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯಾದ್ಯಂತ ಪವಿತ್ರ ರಂಜಾನ್‌ ಮಾಸಾಂತ್ಯದ ಈದ್‌ ಉಲ್‌ ಫಿತರ್‌ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತಾದರೆ, ಬೀದರ್‌ನಲ್ಲಿ ಕೇಂದ್ರದ ವಕ್ಫ್‌ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ಪೌರಾಡಳಿತ ಸಚಿವ ರಹೀಮ್‌ಖಾನ್‌ ಸೇರಿದಂತೆ ಅನೇಕರು ಕಪ್ಪು ಪಟ್ಟಿ ಧರಿಸಿಕೊಂಡು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಕೇಂದ್ರ ಬಸ್‌ ನಿಲ್ಧಾಣದ ಎದುರಿನ ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶಾಂತಿ ಸೌಹಾರ್ದತೆಯ ಸ್ಥಾಪನೆಗಾಗಿ ಪ್ರಾರ್ಥಿಸಿದರು. ರಾಜ್ಯದ ಪೌರಾಡಳಿತ ಸಚಿವ ರಹೀಮ್‌ಖಾನ್‌ ಸೇರಿದಂತೆ ಅನೇಕರು ಸಾಮೂಹಿಪ್ರಾರ್ಥನೆ ಸಲ್ಲಿಸಿದರಲ್ಲದೆ ಈ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಪಾಲ್ಗೊಂಡಿದ್ದರು. ಇವರೊಟ್ಟಿಗೆ ಅನೇಕ ಮುಸ್ಲಿಂ ಸಮುದಾಯದವರು ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆ ಸಲ್ಲಿಸಿದರು. ತದನಂತರ ಒಭ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಿರಿಯರು, ಯುವಕರಷ್ಟೇ ಅಲ್ಲ ಚಿಕ್ಕ ಮಕ್ಕಳೂ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿ ಹೊರಬಂದ ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿತ್ತು.ಹುಮನಾಬಾದ್‌ನಲ್ಲೂ ಸಂಭ್ರಮ

ಹುಮನಾಬಾದ್‌ನಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಯಿಂದ ಈದ್ಗಾ ಮೈದಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ನೆರೆದಿದ್ದ ಸಾವಿರಾರು ಮುಸ್ಲಿಮರ ಪ್ರತಿಯೊಬ್ಬರ ಮೊಗದಲ್ಲೂ ಸಮಾಧಾನ ಭಾವ, ಹಿರಿಯರು, ಕಿರಿಯರೆಲ್ಲರಿಗೂ ಸಂಭ್ರಮ. ಶ್ವೇತ ಹಾಗೂ ವಿವಿಧ ಬಣ್ಣದ ಹೊಸ ಬಟ್ಟೆ ಧರಿಸಿ ಪುಟಾಣಿಗಳಿಗೆ ಪೋಷಕರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮೈದಾನದಿಂದ ಹೊರಬರುತ್ತಿದ್ದಂತೆಯೇ ಎದುರಾದವರೊಂದಿಗೆ ರಂಜಾನ್‌ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಬಳಿಕ ಬಂಧು ಬಾಂಧವರನ್ನು ಭೇಟಿ ಮಾಡಿ ವಿವಿಧ ಭೋಜನಗಳನ್ನು ಹಂಚುವುದರ ಹಾಗೂ ಸವಿಯುವ ಮೂಲಕ ಉಪವಾಸ ಅಂತ್ಯಗೊಳಿಸಿದರು. ಒಂದು ತಿಂಗಳು ಕಟ್ಟುನಿಟ್ಟಾಗಿ ಉಪವಾಸ ಆಚರಿಸುವ ಮೂಲಕ ಶಾಂತಿ, ಸೌಹಾರ್ದತೆಯ ಸಂಕೇತವಾಗಿರುವ ರಂಜಾನ್‌ ಆತ್ಮ ಪರಿಶುದ್ಧತೆಯ ತತ್ವ ಸಾರುವ ಪಾವಿತ್ರ್ಯತೆಯ ಸಂಕೇತವಾಗಿದ್ದು, ಮುಸ್ಲಿಂ ಬಾಂಧವರು ದಾನ, ಧರ್ಮ, ದೇವರಲ್ಲಿ ಪ್ರಾರ್ಥನೆ ಭಕ್ತಿ, ನಿಷ್ಠೆಯಿಂದ ಆಚರಿಸುವ ಪವಿತ್ರ ಹಬ್ಬ ಇದಾಗಿದೆ ಎಂದು ತಿಳಿಸಿದರು.

ಸೈಯದ್‌ ಖಲಿಮುಲ್ಲಾ ಹಾಗೂ ಮುಕ್ತಿ ತನವೀರ್‌ ಹಾಸ್ಮಿ ಹಬ್ಬದ ಪ್ರಯುಕ್ತ ಪ್ರವಚನ ನೀಡಿದರು. ಹಾಫೀಸ್‌ ಅಬ್ದುಲ್‌ ಬಾಸಿದ್‌ ಪ್ರಾರ್ಥನೆ ಹೇಳಿದರು. ಮುಸ್ಲಿಂ ಸಮಾಜದ ಅಧ್ಯಕ್ಷ ಮಹ್ಮದ್‌ ಮೈನೋದ್ದಿನ್‌ ಅಫ್ಸರಮಿಯ್ಯಾ ಹಬ್ಬದ ಮಹತ್ವ ತಿಳಿಸಿದರು. ಉದ್ಯಮಿ ಕಲಿಉಲ್ಲಾ, ಯಾಸಿನ್‌ ಅಲಿ, ನಾಸಿರ್‌ ಖಾನ್‌, ಸೈಯದ್‌ ರಿಜ್ವಾನ್‌ ಸೇರಿದಂತೆ ಅನೇಕ ಗಣ್ಯರು ಇದ್ದರು.

ಡಿವೈಎಸ್ಪಿ ಜೆಎಸ್‌ ನ್ಯಾಮೇಗೌಡರ ಮಾರ್ಗದರ್ಶನ, ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್‌ ನೇತೃತ್ವದಲ್ಲಿ, ಪಿಎಸ್‌ಐ ಸುರೇಶಕುಮಾರ ಚವ್ಹಾಣ್‌ ಸಂಚಾರ ಪಿಎಸ್‌ಐ ಬಸವಲಿಂಗ ಎಂಜಿ, ಪಿಎಸ್‌ಐ ಸವಿತಾ ಸೇರಿದಂತೆ ಪೊಲೀಸ್‌ ಬಂದೋಬಸ್‌ ಕೈಗೊಂಡಿದ್ದರು.

------

ಉತ್ತಮ ಮಳೆ ಬೆಳೆಗಾಗಿ ದೇವರಿಗೆ ಮೊರೆ

ಕಮಲನಗರ: ಮುಸಲ್ಮಾನರ ಪವಿತ್ರ ಹಬ್ಬವಾದ ಈದ್‌ ಉಲ್‌ ಫಿತರ್‌ ಅನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ತಾಲುಕಿನ ವಿವಿದೆಡೆ ಬೆಳಗ್ಗೆ ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸಲ್ಮಾನರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಮುದಾಯದವರೊಂದಿಗೆ ಪರಸ್ಪರ ಆಲಂಗಿಸಿ ಕೈ ಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡರು.

ಮೌಲಾನಾ ಮುಫ್ತಿ ಶಾರುಖ್‌ ಸಾಬ್‌ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಪ್ರಾರ್ಥನೆಯಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ದೇವರಿಗೆ ಮೊರೆ ಇಟ್ಟರು. ಈ ಸಂದರ್ಭದಲ್ಲಿ, ಅಜರ ಬಾಗವಾನ್‌, ಆಯೂಬ್‌ ಖುರೇಷಿ, ಅಬೇದ್‌ ಶೇಖ್‌, ಆಸಿಫ್‌ ಪಟೇಲ್‌, ಮುಕ್ತಾರ ಮನಿಯಾರ್‌, ಶಬ್ಬಿರ್‌ ಖುರೇಷಿ, ಮಾಜೀದ್‌ ಪಠಾಣ್‌, ಜಹಾಂಗೀರ ಶೇಖ್‌, ಆಸೀಫ ಮನಿಯಾರ , ಆರೀಫ ಪಟೇಲ್‌, ಅಕ್ರಮ ಬಾಗವಾನ್‌ ಹಾಗೂ ಅನೇಕ ಮುಸ್ಲಿಂ ಸಮುದಾಯದವರು ಇದ್ದರು. ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕಮಲನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಚಂದ್ರಶೇಖರ ನಿರ್ಣೆ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಯಿತು.

---ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬಸವಕಲ್ಯಾಣ: ರಂಜಾನ್‌ ಹಬ್ಬದ ನಿಮಿತ್ತ ನಗರದ ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ ಈದ್ಗಾ ಮೈದಾನದಲ್ಲಿ ನಡೆಯಿತು. ಇದರಲ್ಲಿ ನಗರದ ಸಹಸ್ರಾರು ಸಂಖ್ಯೆಯ ಮುಸ್ಲಿಂಮರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಎಂಎಲ್‌ಸಿ ವಿಜಯಸಿಂಗ್‌ ಅವರು ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಂ ಸಮುದಾಯದವರಿಗೆ ರಂಜಾನ್‌ ಹಬ್ಬದ ಶುಭಾಶಯ ಕೋರಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಲಕಂಠ ರಾಠೋಡ್, ನಗರ ಅಧ್ಯಕ್ಷ ಅಜರ್ ಅಲಿ ನವರಂಗ್, ನಗರ ಸಭೆ ಅಧ್ಯಕ್ಷರು ಎಂ.ಡಿ ಸಗೀರುದ್ದೀನ್‌, ಬಾಬು ಹೊನ್ನಾ ನಾಯಕ, ಅನ್ವರ ಬೇಗ್‌ ಸಾಬ್‌, ರಬ್ಬಾನಿ ಬಾಬ್‌ ಸಾಬ್‌, ತಹಸೀನ್‌ ಅಲಿ ಜಮಾದಾರ್‌, ಮಕದೂಮ್‌ ಸೇಠ್‌, ಎಂಡಿ ಮಿನಾಹಜ , ಖಲೀಲ್‌ ಸಾಬ್‌, ನಗರಸಭೆ ಸದಸ್ಯರು ರವಿ ಬೊರಾಳೆ, ಏಜಾಜ್‌ ಲಾತೂರೆ, ಎಂಡಿ ಕದೀರುದ್ದೀನ್‌, ಡಿಕೆ ದಾವೂದ್, ಶರಣು ಅಲಗೂಡ್‌, ಓಂ ಪಾಟೀಲ್‌ ಜನಾಪುರ, ಜೈದೀಪ್ ತೇಲಂಗ್‌ ಅನೇಕ ಮುಖಂಡರು ಉಪಸ್ಥಿತರಿದ್ದು ಒಬ್ಬರಿಗೊಬ್ಬರು ಶುಭಾಷಯ ಕೋರಿದರು.

----

ಔರಾದ್‌ನಲ್ಲಿ ಸಂಭ್ರಮದ ರಂಜಾನ್‌

ಔರಾದ್‌: ತಾಲೂಕಿನಾದ್ಯಂತ ಸೋಮವಾರ ಮುಸ್ಲಿಂ ಸಮುದಾಯದವರು ಸಡಗರ ಸಂಭ್ರಮದಿಂದ ಈದ್‌ ಉಲ್‌ ಫಿತರ್‌ ಆಚರಿಸಿದರು. ಔರಾದ್‌ ಪಟ್ಟಣ ಸೇರಿದಂತೆ ಚಾಲೂಕಿನ ಸಂತಪೂರ್‌, ಬೆಳಕುಣಿ, ರಾಯಪಳ್ಳಿ, ಚಿಂತಾಕಿ, ಎಕಂಬಾ ಹಾಗೂ ಕೊಳ್ಳೂರ್‌ ಗ್ರಾಮಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಯಿತು. --

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...