ಕನ್ನಡಪ್ರಭ ವಾರ್ತೆ ಬೀದರ್‌ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಡಗರ ಸಂಭ್ರಮದಿಂದ ಈದ್ ಉಲ್ ಫಿತರ್ (ರಂಜಾನ್) ಆಚರಣೆಯನ್ನು ಮಾಡಲಾಯಿತು.
ಕಮಲನಗರದಲ್ಲಿ ರಂಜಾನ್ ಸಮಾನತೆ, ಸಹೋದರತ್ವದ ಪ್ರತೀಕಪವಿತ್ರ ರಂಜಾನ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರೆಲ್ಲ ಸೇರಿ ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಮುಫ್ತಿ ಶಾರುಖ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.
ರಂಜಾನ್ ತಿಂಗಳಲ್ಲಿ ನಿರಂತರ ಉಪವಾಸ ವ್ರತ ಕೈಗೊಳ್ಳುವ ಮೂಲಕ ಮುಸ್ಲಿಂ ಬಾಂಧವರು ಹಬ್ಬದ ಮುನ್ನಾ ದಿನ ರಾತ್ರಿ ಚಂದ್ರನ ದರ್ಶನ ಮಾಡಿ ಹಬ್ಬಕ್ಕೆ ಚಾಲನೆ ನೀಡಿದರು. ಬುಧವಾರ ರಾತ್ರಿ ಚಂದ್ರನ ದರ್ಶನ ಪಡೆದು ಮುಸ್ಲಿಂ ಬಾಂಧವರು ಚಾಂದ್ ಮುಬಾರಕ್ ಎಂದು ಪರಸ್ಪರ ಶುಭಾಶಯ ಕೋರಿ ಮರು ದಿನ ಗುರುವಾರ ಪವಿತ್ರ ರಂಜಾನ ಹಬ್ಬ ಸಡಗರ, ಸಂಭ್ರಮದಿಂದ ಆಚರಿಸಿದರು.ಹಬ್ಬದ ದಿನ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಡವರಿಗೆ, ದೀನ ದಲಿತರಿಗೆ, ರೋಗಿಗಳಿಗೆ ತಮ್ಮ ಶಕ್ತಿ ಅನುಸಾರವಾಗಿ ದಾನ ಮಾಡುವುದು ಇವರ ಸಂಪ್ರದಾಯ. ಈ ಹಬ್ಬ ಸಮಾನತೆ ಹಾಗೂ ಸಹೋದರತ್ವದ ಪ್ರತೀಕವಾಗಿ ಆಚರಿಸುತ್ತಾರೆ. ಮುಸ್ಲಿಂ ಸಮುದಾಯದ ಅತಿ ದೊಡ್ಡ ಹಬ್ಬವೆಂದು ಕರೆಯಲ್ಪಡುವ ರಂಜಾನ್ ಹಬ್ಬದಂದು ಮನೆಯಲ್ಲಿ ಶುರಕುಂಬಾ, ಬಗೆ ಬಗೆಯ ಸಿಹಿ ತಿಂಡಿ ತಿನಿಸು ತಯಾರಿಸಿ ಜಾತಿ, ಭೇದ ಎನ್ನದೆ ಎಲ್ಲ ಸಮುದಾಯದವರಿಗೂ ಭಾವೈಕ್ಯತೆಯ ದೃಷ್ಟಿಯಿಂದ ಔತಣಕ್ಕೆ ಆಹ್ವಾನಿಸುತ್ತಾರೆ.
ತಾಲೂಕಿನ ಖತಗಾಂವ್, ಮುರ್ಕಿ, ರಂಡ್ಯಾಳ, ಡೋಣಗಾಂವ್, ಸೋನಾಳ, ಹೋಳಸಮುದ್ರ, ಠಾಣಾಕುಶನೂರ, ದಾಬಕಾ, ಬೇಳಕೋಣಿ(ಭೋ), ತೋರಣಾ, ಮುಧೋಳ ಹಾಗೂ ವಿವಿಧ ಗ್ರಾಮಗಳಲ್ಲಿ ಪವಿತ್ರ ರಂಜಾನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಶಾಂತಿ ಸೌಹಾರ್ದತೆಯ ಪ್ರತೀಕವಾದ ಮುಸ್ಲಿಂ ಧರ್ಮಿಯರ ಈದ್ ಉಲ್ ಫಿತರ್ ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಮುಸ್ಲಿಂ ಸಮುದಾಯದವರಿಗೆ ಶುಭಾಶಯ ಕೋರಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಈ ಸಂಧರ್ಭದಲ್ಲಿ ಮಾತನಾಡಿ. ಪವಿತ್ರವಾದ ರಂಜಾನ್ ಹಬ್ಬ ಶಾಂತಿ ಸೌಹಾರ್ದತೆಯ ಸಂಕೇತ. ಹಿಂದೂ ಮುಸ್ಲಿಂಮರು ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದೇವೆ. ರಂಜಾನ್ ಸೇರಿದಂತೆ ಹಿಂದೂ, ಮುಸ್ಲಿಂಮರ ಎಲ್ಲ ಹಬ್ಬವನ್ನು ಜೊತೆಗೂಡಿಯೇ ಆಚರಿಸೋಣ ಎಂದರು. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಇಸ್ಲಾಂ ಧರ್ಮದ ಸಿದ್ಧಾಂತಗಳಲ್ಲಿ ಪ್ರಮುಖವಾದ ಉಪವಾಸವನ್ನು ಒಂದು ತಿಂಗಳ ಕಾಲ ಶ್ರದ್ಧಾ ಭಕ್ತಿಯಿಂದ ಮಾಡುವ ಮೂಲಕ ನಾಡಿನಾದ್ಯಂತ ಶಾಂತಿ, ಸೌಹಾರ್ದತೆಯ ರಂಜಾನ್ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಮುಸ್ಲಿಂ ಭಾಂಧವರಿಗೆ ಇದೆ ಸಂಧರ್ಭದಲ್ಲಿ ಶುಭಾಶಯ ಕೋರಿದರು.