ಕೊಪ್ಪಳದಲ್ಲಿ ಮತ್ತೆ ಎಂಟು ಕಾರ್ಖಾನೆಗಳು ಸೀಜ್?

KannadaprabhaNewsNetwork |  
Published : Oct 30, 2026, 02:30 AM IST
ಫೋಟೋ ಸೀಜ್ ಮಾಡಲಿರುವ ಕಂಪನಿಗಳ ಪಟ್ಟಿ ಕಾರ್ಖಾನೆ ಫೈಲ್ ಫೋಟೋ | Kannada Prabha

ಸಾರಾಂಶ

ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕೊಪ್ಪಳ ತಾಲೂಕಿನ ಎಂಟು ಕೈಗಾರಿಕಾ ಘಟಕಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸು ಮಾಡಿರುವ ಮಾಹಿತಿ ಹೊರಬಿದ್ದಿದೆ.

ಕೊಪ್ಪಳ: ಕಾರ್ಖಾನೆಗಳ ಮಾಲಿನ್ಯದಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕೊಪ್ಪಳ ತಾಲೂಕಿನ ಎಂಟು ಕೈಗಾರಿಕಾ ಘಟಕಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸು ಮಾಡಿರುವ ಮಾಹಿತಿ ಹೊರಬಿದ್ದಿದೆ.

ಈ ಸಂಬಂಧದ ಶಿಫಾರಸು ಮಾಡಿರುವ ಆದೇಶದ ಪ್ರತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ಶೀಘ್ರದಲ್ಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ಕ್ಲೋಸರ್ ನೋಟಿಸ್ ಜಾರಿಯಾಗುವ ಸಾಧ್ಯತೆಯಿದೆ.

ಕೊಪ್ಪಳ ತಾಲೂಕಿನ ಚಿಕ್ಕಬಾಗನಾಳ, ಕುಣಿಕೆರೆ, ಹಿರೇಬಗನಾಳ ಹಾಗೂ ಹಾಲವರ್ತಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳ ವಿರುದ್ಧ ಈ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಬಾಬಾ ಅಖಿಲಾ, ಭದ್ರಶ್ರೀ, ಧ್ರುವ ದೇಶ, ಐಎಲ್‌ಸಿ ಸ್ಟೀಲ್, ಪಿಬಿಎಸ್ ಸ್ಟೀಲ್, ಎಸ್‌ಕೆ ಸ್ಟೀಲ್ ಹಾಗೂ ತನುಷ್ ಸ್ಪಾಂಜ್ ಐರನ್‌ನ ಯುನಿಟ್-1 ಮತ್ತು ಯುನಿಟ್-2 ಘಟಕಗಳನ್ನು ಮುಚ್ಚುವ ಕುರಿತು ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ನಿಯಮಗಳ ಉಲ್ಲಂಘನೆ ಕುರಿತು ಚರ್ಚೆ ನಡೆಸಿದ ಬಳಿಕ ಸಂಬಂಧಿಸಿದ ಘಟಕಗಳನ್ನು ಮುಚ್ಚಲು ನಿರ್ದೇಶನ ನೀಡುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಅಧಿಕೃತ ಕ್ಲೋಸರ್ ನೋಟಿಸ್ ಜಾರಿಯಾಗುವ ವರೆಗೆ ಬಂದ್ ಜಾರಿಯ ದಿನಾಂಕ ಸ್ಪಷ್ಟವಾಗಿಲ್ಲ.

ಮಾಲಿನ್ಯ ವಿರುದ್ಧ ಹೆಚ್ಚಿದ ಆಕ್ರೋಶ: ಕೊಪ್ಪಳ ತಾಲೂಕಿನ ಹಲವು ಗ್ರಾಮಗಳ ಸುತ್ತಮುತ್ತ ಸ್ಪಾಂಜ್ ಐರನ್ ಸೇರಿದಂತೆ ವಿವಿಧ ಕೈಗಾರಿಕೆಗಳಿದ್ದು, ಕಾರ್ಖಾನೆಗಳಿಂದ ಹೊರಸೂಸುವ ಹೊಗೆ ಹಾಗೂ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಕೈಗಾರಿಕಾ ತ್ಯಾಜ್ಯ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹಿಸಿ ಹೋರಾಟಗಳು ತೀವ್ರಗೊಂಡಿವೆ.

ಇದೇ ಸಂದರ್ಭದಲ್ಲಿ ಬಲ್ಡೋಟ ಕಾರ್ಖಾನೆ ವಿರೋಧಿ ಹೋರಾಟವೂ ನಿರ್ಣಾಯಕ ಹಂತ ತಲುಪಿದೆ. ಕಾರ್ಖಾನೆಯಿಂದ ಉಂಟಾಗುತ್ತಿರುವ ಮಾಲಿನ್ಯ ತಡೆದು ಜನರ ಆರೋಗ್ಯ ರಕ್ಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಿರಂತರ ಧರಣಿ ನಡೆಸುತ್ತಿವೆ.

ಉತ್ತಮ ಬೆಳವಣಿಗೆ: ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ನಿರಂತರ ಹೋರಾಟಕ್ಕೆ ದೊರೆತ ಪ್ರಾಥಮಿಕ ಜಯವಾಗಿದೆ. ನಿರಂತರ ಹೋರಾಟ ಮಾಡಿದರೆ ಖಂಡಿತವಾಗಿಯೂ ಕ್ರಮವಾಗುತ್ತದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೋರಾಟ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು