ಎಂಟರಿಂದ ಹತ್ತು ಹೀಗಿತ್ತು...: 35 ವರ್ಷ ಬಳಿಕ ಮುಡಿಪು ಸರ್ಕಾರಿ ಹೈಸ್ಕೂಲ್‌ ವಿದ್ಯಾರ್ಥಿಗಳ ಸಮ್ಮಿಲನ

KannadaprabhaNewsNetwork | Published : Apr 2, 2025 1:02 AM

ಸಾರಾಂಶ

ಉಳ್ಳಾಲ ತಾಲೂಕಿನ ಕುರ್ನಾಡು ಮುಡಿಪು ಸರ್ಕಾರಿ ಪ.ಪೂ.ಕಾಲೇಜಿನ ಹೈಸ್ಕೂಲ್‌ ವಿಭಾಗದ 1987-90ನೇ ಬ್ಯಾಚಿನ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯಲ್ಲಿ ನೆರವೇರಿತು. 8-10ನೇ ತರಗತಿ ತನಕ ಕಲಿತ ಎಲ್ಲ ಹಳೆಯ ವಿದ್ಯಾರ್ಥಿಗಳು, ‘ಎಂಟರಿಂದ ಹತ್ತು.. ಹೀಗಿತ್ತು...’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಯ ಕ್ಷಣಗಳಿಗೆ ಜತೆಯಾದರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಅವರೆಲ್ಲರೂ 50ರ ಹರೆಯದ ಆಸುಪಾಸಿನವರು. ಅವರೆಲ್ಲರೂ ಆ ದಿನ 35 ವರ್ಷ ಕಿರಿಯರಾಗಿದ್ದರು, ತಮಗೆ ಕಲಿಸಿದ ಶಿಕ್ಷಕರ ಎದುರು ಮತ್ತೆ ಮಕ್ಕಳಾಗಿ ಸಂಭ್ರಮಿಸಿದರು, ಗುರುವಂದನೆ ಸಲ್ಲಿಸಿದರು, ಬಾಲ್ಯದ ದಿನಗಳ ಮೆಲುಕು ಹಾಕಿದರು.

ಉಳ್ಳಾಲ ತಾಲೂಕಿನ ಕುರ್ನಾಡು ಮುಡಿಪು ಸರ್ಕಾರಿ ಪ.ಪೂ.ಕಾಲೇಜಿನ ಹೈಸ್ಕೂಲ್‌ ವಿಭಾಗದ 1987-90ನೇ ಬ್ಯಾಚಿನ ಸಹಪಾಠಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಸಂಸ್ಥೆಯಲ್ಲಿ ನೆರವೇರಿತು.

8-10ನೇ ತರಗತಿ ತನಕ ಕಲಿತ ಎಲ್ಲ ಹಳೆಯ ವಿದ್ಯಾರ್ಥಿಗಳು, ‘ಎಂಟರಿಂದ ಹತ್ತು.. ಹೀಗಿತ್ತು...’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಯ ಕ್ಷಣಗಳಿಗೆ ಜತೆಯಾದರು.

ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ಗೃಹಿಣಿಯರಾಗಿ ಸಂಸಾರ ಜವಾಬ್ದಾರಿ ಹೊತ್ತಿರುವ ಸುಮಾರು 25 ಮಂದಿ ಮಧ್ಯವಸ್ಕರು ಬಾಲಕ ಬಾಲಕಿಯರಾಗಿ ರಾರಾಜಿಸಿದರು. ಮೂರು ವರ್ಷಗಳ ಹೈಸ್ಕೂಲ್‌ ಜೀವನದಲ್ಲಿ ಒಟ್ಟಾಗಿ ಕಲಿತ ಅಷ್ಟೂ ಸಹಪಾಠಿಗಳು ಅದೇ ಶಿಕ್ಷಣ ಸಂಸ್ಥೆಯ ಕಿರು ಸಭಾಂಗಣದಲ್ಲಿ ಇಡೀ ದಿನ ಕಳೆದರು. ತಮ್ಮ ತುಂಟಾಟ, ಮುಗ್ಧತೆ, ರಸವತ್ತಾದ ಕ್ಷಣಗಳನ್ನು ಸ್ಮರಿಸಿ ಸಂಭ್ರಮಿಸಿದರು.

35 ವರ್ಷಗಳ ಹಿಂದೆ ತಮಗೆ ಕಲಿಸಿ, ಈಗ ನಿವೃತ್ತ ಜೀವನವನ್ನು ಕಳೆಯುತ್ತಿರುವ ಶಿಕ್ಷಕರೂ ಆಗಮಿಸಿ ತಮ್ಮ ಅಧ್ಯಾಪನ ವೃತ್ತಿಯ ನೆನಪುಗಳನ್ನು ಮೆಲುಕು ಹಾಕಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಶಿಕ್ಷಕರಾಗಿದ್ದ ಶೀನ ಶೆಟ್ಟಿ (ದೈಹಿಕ ಶಿಕ್ಷಕರು), ಅಪ್ಪಣ್ಣ ನಾಯಕ್‌ (ಗಣಿತ ಶಿಕ್ಷಕರು), ಜಯರಾಮ ಶೆಟ್ಟಿ (ಗಣಿತ ಶಿಕ್ಷಕರು), ಬಸವರಾಜ ಪಲ್ಲಕಿ (ಕನ್ನಡ, ಸಮಾಜ ಶಿಕ್ಷಕರು), ಸುಮನಾ ಗಾಂವ್ಕರ್‌ (ಕನ್ನಡ ಶಿಕ್ಷಕಿ) ಪಾಲ್ಗೊಂಡರು.

ಬಾಲಕ-ಬಾಲಕಿಯರಂತಾಗಿದ್ದ 50ರ ಹರೆಯದ ಹಳೆಯ ವಿದ್ಯಾರ್ಥಿಗಳು ವಿಧೇಯರಾಗಿ ತಮ್ಮ ಪ್ರೀತಿಯ ಶಿಕ್ಷಕರ ಮಾತುಗಳನ್ನು ಆಲಿಸಿದರು.

ಆ ಕಾಲದಲ್ಲಿ ಶಾಲಾ ಆರಂಭ ಗೀತೆಯಾಗಿದ್ದ ‘ಜ್ಯೋತಿ ಬೆಳಗಿ ಬರಲಿ, ಜ್ಞಾನದ ಜ್ಯೋತಿ ಬೆಳಗಿ ಬರಲಿ’ ಎಂಬ ಹಾಡನ್ನು ಹಳೆಯ ವಿದ್ಯಾರ್ಥಿನಿಯರು ಹಾಡಿ ಒಂದು ರೀತಿಯ ಭಾವುಕ ಕ್ಷಣಕ್ಕೆ ಕಾರಣರಾದರು.

ಬೆಂಗಳೂರು, ಮಂಗಳೂರು, ದುಬೈ, ಚೆನ್ನೈ ಮತ್ತಿತರ ಊರುಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯತತ್ಪರರಾಗಿರುವ ಈ ಎಲ್ಲಾ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

Share this article