ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‌ಮನೆ ಸಹಕಾರಿ: ಸೂದನ ಈರಪ್ಪ

KannadaprabhaNewsNetwork | Published : Dec 18, 2024 12:48 AM

ಸಾರಾಂಶ

ಅರೆ ಭಾಷಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ತೋರದೆ ಮುಂದಿನ ಜನಾಂಗಕ್ಕೆ ಪೂರಕವಾಗಿ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಬೇಕು. ಇದಕ್ಕೆ ಅಕಾಡೆಮಿ ಸಹಾಯ ಪಡೆಯಬೇಕು ಎಂದು ಕಾಫಿ ಬೆಳೆಗಾರ ಮೂಲೆ ಮಜಲು ಮುತ್ತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅರೆಭಾಷಿಕರ ಭಾಷೆ, ಸಂಸ್ಕೃತಿ, ಸಂಪ್ರದಾಯದಲ್ಲಿ ಕೊಡಗಿನ ಐನ್‌ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‌ಮನೆಯ ಪಾತ್ರ ಅತ್ಯಂತ ವಿಶಿಷ್ಟವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸೂದನ ಎನ್.ಈರಪ್ಪ ಹೇಳಿದರು.ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 14ನೇ ಅರೆಭಾಷೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಮುಂದಿನ ದಿನಗಳಲ್ಲಿ ಐನ್‌ಮನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷಿಕರನ್ನು ಒಟ್ಟುಗೂಡಿಸಿ ಭಾಷೆ-ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುವಂತಾಗಬೇಕು. ಇಂದಿನ ಯುವ ಸಮೂಹ ಸಂಸ್ಕೃತಿ-ಭಾಷೆಯ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಅಕಾಡೆಮಿ ಈ ಯುವ ಸಮೂಹಕ್ಕೆ ವಿಶೇಷ ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಿದೆ ಎಂದರು.

ಕಾಫಿ ಬೆಳೆಗಾರ ಮೂಲೆಮಜಲು ಮುತ್ತಪ್ಪ ಮಾತನಾಡಿ, ಅರೆಭಾಷಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ತೋರದೆ ಮುಂದಿನ ಜನಾಂಗಕ್ಕೆ ಪೂರಕವಾಗಿ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಬೇಕು. ಇದಕ್ಕೆ ಅಕಾಡೆಮಿಯ ಸಹಾಯ ಪಡೆಯಬೇಕು ಎಂದು ಹೇಳಿದರು.

ಯಡವಾರೆ ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷ ಹಾಗೂ ವಕೀಲ ಪೊನ್ನಚ್ಚನ ಗಣಪತಿ ಮಾತನಾಡಿ, ಹಿರಿಯರು ಕಿರಿಯರಿಗೆ ಭಾಷೆ-ಸಂಸ್ಕೃತಿಯ ಬಗ್ಗೆ ತಿಳಿಹೇಳಿ, ಅರೆಭಾಷೆಯನ್ನು ಉಳಿಸಿ ಬೆಳೆಸಲು ಮಾರ್ಗದರ್ಶನ ನೀಡಬೇಕು ಎಂದರು.ಅಧ್ಯಕ್ಷತೆ ವಹಿಸಿದ ಗೌಡ ಸಮಾಜ ಅಧ್ಯಕ್ಷ ಬಾರನ ಭರತ್ ಕುಮಾರ್ ಮಾತನಾಡಿ, ಮುಂದೆ ನಮ್ಮ ಸಮಾಜದ ವತಿಯಿಂದ ಅಕಾಡೆಮಿ ಸಹಯೋಗದೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಅರೆಭಾಷಿಕರನ್ನು ಒಟ್ಟುಗೂಡಿಸಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಬಾರನ ಗ್ರೀಷ್ಮಾ ಭರತ್ ಅವರಿಗೆ ಚೆರಿಯಮನೆ ರಾಮಪ್ಪ ನೀಡಿದ ನಗದು ಪುರಸ್ಕಾರ ಹಾಗೂ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ನಂಗಾರು ವೈಷ್ಣವಿ ಅವರಿಗೆ ಕಾಳೇರಮ್ಮ ಸಾವಿತ್ರಿ ಅವರು ನೀಡಿದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

Share this article