ಕೆರೆಯ ನೀರು ಕಾಯುತ್ತಿರುವ ಎಕ್ಲಾಸಪುರ ಗ್ರಾಮಸ್ಥರು

KannadaprabhaNewsNetwork |  
Published : May 23, 2026, 02:00 AM IST
22ಕೆಪಿಎಲ್24 ಜೋಪಡಿಯ ಮುಂದೆ ತಾಯಿಯೊಂದಿಗೆ ವಿದ್ಯಾರ್ಥಿನಿ | Kannada Prabha

ಸಾರಾಂಶ

ಗುಡಿಗೇರಿ, ಕವಲೂರು ಗ್ರಾಮದ ಕೆರೆಗಳು ಬತ್ತಿ ಹೋಗಿವೆ. ಹೀಗಾಗಿ ಪಕ್ಕದ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದಲ್ಲಿರುವ ಕೆರೆಯಲ್ಲಿ ನೀರು ಇದ್ದು, ಅಲ್ಲಿಂದಲೇ ನೀರು ತರಬೇಕಾಗಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಈ ಗ್ರಾಮಗಳ ಜನರಿಗೆ ಕುಡಿಯಲು ನೀರಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ, ಕೆರೆ ನೀರನ್ನಾದರೂ ಆಶ್ರಯಿಸೋಣ ಎಂದರೆ ಸುತ್ತಮುತ್ತಲಿನ ಕೆರೆಗಳು ಬತ್ತಿ ಹೋಗಿವೆ. ಈಗ ಪಕ್ಕದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದ ಕೆರೆಯಲ್ಲಿ ಮಾತ್ರ ನೀರು ಇದೆ. ಗ್ರಾಮಕ್ಕೆ ಸಮೀಪದಲ್ಲೇ ಇದ್ದರೂ ಅಲ್ಲಿನ ನೀರಿಗೆ ಆ ಗ್ರಾಮಸ್ಥರು ಕಾಯುತ್ತಿದ್ದು ನೀರು ನೀಡುತ್ತಿಲ್ಲ ಎಂಬ ಆರೋಪ ಕೊಪ್ಪಳ ತಾಲೂಕಿನ ಜನರದ್ದು.

ಹೀಗಾಗಿ, ಕೊಪ್ಪಳ ತಾಲೂಕಿನ ಗುಡಿಗೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಎಕ್ಲಾಸಪುರ ಗ್ರಾಮದ ಕೆರೆ ನೀರೇ ಗತಿ. ಅಲ್ಲಿಂದ ತಂದರೆ ನೀರು ಇಲ್ಲದಿದ್ದರೆ ಇಲ್ಲ. ಬೇರೆಯವರು ನೀರು ಒಯ್ದರೆ ನಮ್ಮೂರಿಗಿಲ್ಲವಾಗುತ್ತದೆ ಎಂದು ಎಕ್ಲಾಸಪುರ ಗ್ರಾಮಸ್ಥರು ಕೆರೆಯನ್ನೇ ಕಾಯುತ್ತಾ ನೀರು ಕಾಪಾಡಿಕೊಳ್ಳುತ್ತಿದ್ದಾರೆ. ಇದರಿಂದ ಗುಡಿಗೇರಿ, ಕವಲೂರು ಸೇರಿದಂತೆ ಕೊಪ್ಪಳ ತಾಲೂಕಿನ ಗ್ರಾಮಗಳ ನೀರಿನ ಗೋಳು ಹೇಳತೀರದಾಗಿದೆ.

ಇದ್ಯಾವುದೋ ಹಳೆಯ ಕಾಲದ ಚಲನಚಿತ್ರ ಕಥೆಯ ರೀತಿ ಇದ್ದರೂ, ಸದ್ಯದ ಗುಡಿಗೇರಿ, ಕವಲೂರು ಗ್ರಾಮಸ್ಥರು ಅನುಭವಸುತ್ತಿರುವ ಯಾತನೆ ಇದು.

ಗುಡಿಗೇರಿ, ಕವಲೂರು ಗ್ರಾಮದ ಕೆರೆಗಳು ಬತ್ತಿ ಹೋಗಿವೆ. ಹೀಗಾಗಿ ಪಕ್ಕದ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದಲ್ಲಿರುವ ಕೆರೆಯಲ್ಲಿ ನೀರು ಇದ್ದು, ಅಲ್ಲಿಂದಲೇ ನೀರು ತರಬೇಕಾಗಿದೆ. ಆದರೆ ಬೇಸಿಗೆ ಇನ್ನೂ ಘನಘೋರ ಎನ್ನುವಂತೆ ಇರುವುದರಿಂದ ನೀರು ಖಾಲಿಯಾದರೆ ನಮ್ಮೂರಿಗೂ ಇದೇ ಗತಿ ಬಂದಿತು. ನಾವು ನೀರಿಗಾಗಿ ಅಲೆಯಬೇಕಾಗಿದಿತು ಎಂದು ತಮ್ಮೂರ ಕೆರೆಯನ್ನು ದೂರದಲ್ಲಿಯೇ ನಿಂತು ಕಾಯುತ್ತಿದ್ದಾರೆ. .

ಕುಡಿಯುವ ನೀರಿಗಾಗಿ ಪಕ್ಕದ ತಾಲೂಕಿನ ಎಕ್ಲಾಸಪುರ ಗ್ರಾಮದ ಕೆರೆಗೆ ಹೋಗಿ ವಿಧಿಯಿಲ್ಲದೆ ವಾಪಸ್‌ ಬರುವಂತಾಗಿದೆ. ಆದರೂ ಸಹ ಆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಕೊಪ್ಪಳ ತಾಲೂಕಿನ ಆಡಳಿತಕ್ಕೆ ನಾಚಿಕೆಯಾಗಬೇಕು

ಕೊಪ್ಪಳ ತಾಲೂಕಿನ ಗುಡಿಗೇರಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳಿಂದ ನೀರು ಬಂದಿಲ್ಲ. ಅತ್ತ ನಾಲ್ಕಾರು ಕಿಮೀ ದೂರದಲ್ಲಿ ಇರುವ ಎಕ್ಲಾಸಪುರ ಗ್ರಾಮದ ಬಳಿ ಇರುವ ಕೆರೆಯಲ್ಲಿನ ನೀರು ತರಲು ಬಿಡುತ್ತಿಲ್ಲ. ಗುಡಿಗೇರಿ ಗ್ರಾಮಸ್ಥರ ಗೋಳು ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಏನು ಸಮಸ್ಯೆ: ಗುಡಿಗೇರಿ ಗ್ರಾಮಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದೆ. ಆದರೆ, ಸರಿಯಾಗಿ ನೀರು ಬರುವುದೇ ಇಲ್ಲ. ಕಳೆದ ಹದಿನೈದು ದಿನಗಳಿಂದ ನೀರು ಬಂದಿಲ್ಲ. ಹೀಗಾಗಿ ಈ ಗ್ರಾಮದವರು ನೀರಿಗಾಗಿ ಅಲೆಯುವಂತಾಗಿದೆ.

ನಾಲ್ಕಾರು ಕಿಮೀ ಸುತ್ತಿ ಹೊಲದಲ್ಲಿರುವ ಕೃಷಿ ಹೊಂಡ, ಇಲ್ಲವೇ ಪಕ್ಕದ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದ ಕೆರೆಯ ನೀರಿಗಾಗಿ ಪರಿತಪಿಸುವಂತಾಗಿದೆ.

ಜಾನುವಾರುಗಳಿಗೆ ಸಿಗುವ ನೀರು , ಜನರಿಗಿಲ್ಲ: ಗುಡಿಗೇರಿ ಕೆರೆಯ ನೀರಿನ ಸಮಸ್ಯೆಯ ರಿಯಾಲಿಟಿ ಚೆಕ್ ಮಾಡಲು ಕನ್ನಡಪ್ರಭ ತೆರಳಿದಾಗ ಮುಂಡರಗಿ ತಾಲೂಕಿನ ಎಕ್ಲಾಸಪುರ ಗ್ರಾಮದ ಕೆರೆಯಲ್ಲಿ ಜಾನುವಾರುಗಳು ನೀರು ಕುಡಿಯುತ್ತಿದ್ದವು. ಆದರೆ, ಇದೇ ಕೆರೆಯಲ್ಲಿ ಪಕ್ಕದೂರಿನವರು ನೀರು ತುಂಬಿಕೊಳ್ಳಲು ಹೋದರೆ ಅವಕಾಶ ನೀಡದೆ ಇರುವುದು ಕಂಡು ಬಂದಿತು. ಈ ಕುರಿತು ಅಲ್ಲಿರುವವರನ್ನು ಕೇಳಿದರೆ ಯಾರಿಗೂ ನಾವು ಬೇಡ ಎನ್ನುವುದಿಲ್ಲ ಎಂದೇ ಹೇಳುತ್ತಾರೆ. ಆದರೆ, ಗುಡಿಗೇರಿ ಗ್ರಾಮಸ್ಥರು ನೀರು ತುಂಬಿಕೊಳ್ಳಲು ಹೋದಾಗ ವಿರೋಧ ಮಾಡುತ್ತಾರೆ ಎನ್ನುವುದು ಗೊತ್ತಾಯಿತು. ಅದಕ್ಕೆ ನೀಡುವ ಕಾರಣ, ನಮ್ಮೂರ ಕೆರೆಯಲ್ಲಿ ನೀರು ಖಾಲಿಯಾದರೆ ನಾವು ಎಲ್ಲಿಗೆ ಹೋಗಬೇಕು ಎನ್ನುತ್ತಾರೆ. ಪಕ್ಕದ ತಾಲೂಕಿನ ಗ್ರಾಮವಾಗಿರುವುದರಿಂದ ನಾವು ಪ್ರಶ್ನೆ ಮಾಡುವಂತೆ ಇಲ್ಲ ಎನ್ನುತ್ತಾರೆ ಶಂಕರ ತೋಟದ.

ಹದಿನೈದು ದಿನವಾದರೂ ನಮ್ಮೂರಿಗೆ ನೀರೇ ಬಂದಿಲ್ಲ. ನಾವು ಹೆಂಗ್ ಮಾಡಬೇಕು ನೀವೇ ಹೇಳಿ. ಸಂಪನ್ನಲ್ಲಿ ತಳ ಸೇರಿದ್ದ ನೀರನ್ನೇ ಸೇದಿ ಸೇದಿ ತರುತ್ತಿದ್ದೇವೆ ನೋಡ್ರಿ ಎಂದು ಗುಡಿಗೇರಿ ನಿವಾಸಿ ಕಾಂತೆಮ್ಮ ತಿಳಿಸಿದ್ದಾರೆ.

ನಮ್ಮೂರ ಕೆರೆ ಬತ್ತಿದೆ. ಕವಲೂರು ಗ್ರಾಮದ ಕೆರೆಯೂ ಬತ್ತಿದೆ. ಈಗ ಇರುವುದೊಂದೆ ಕೆರೆ, ಪಕ್ಕದ ಮುಂಡರಗಿ ತಾಲೂಕಿನ ಎಕಸ್ಲಾಪುರ ಗ್ರಾಮದ ಕೆರೆಯಲ್ಲಿ ಮಾತ್ರ ನೀರು ಇವೆ. ಅವರು ಸಹ ತಮ್ಮೂರ ಕೆರೆ ಕಾಯ್ದುಕೊಳ್ಳುತ್ತಿದ್ದಾರೆ. ಪಕ್ಕದೂರಿನವರಿಗೆ ನೀರು ತುಂಬಿಕೊಳ್ಳಲು ಬಿಡುವುದಿಲ್ಲ. ಅದು ಪಕ್ಕದ ಜಿಲ್ಲೆ ಆಗಿರುವುದರಿಂದ ನಾವೂ ಕೇಳುವಂತೆ ಇಲ್ಲ.ನಮ್ಮ ತಾಲೂಕಾಡಳಿತಕ್ಕೆ ನೀರು ಕೊಡಲು ಆಗುತ್ತಿಲ್ಲವಲ್ಲ ಎಂದು ಗುಡಿಗೇರಿ ಗ್ರಾಮದ ಮುಖಂಡ ಜಗದೀಶಗೌಡ ತೆಗ್ಗಿನಮನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣಕೋಣ ಗ್ರಿಡ್‌ನಿಂದಲೇ ಮರಳಿ ವಿದ್ಯುತ್ ಸಂಪರ್ಕ: ಗ್ರಾಮಸ್ಥರ ಹರ್ಷ
ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ: ಆಂಜನೇಯ