ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅರ್ಜುನ್ ಮುಂಡಾ ಸೇರಿದಂತೆ ರಾಜ್ಯದ ವಿವಿಧ ಸಚಿವರು, ಗಣ್ಯ ವ್ಯಕ್ತಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದರು.
ದೇಶದ ವಿವಿಧ ರಾಜ್ಯಗಳಿಂದ 4500 ಕ್ರೀಡಾಪಟುಗಳು, 1500 ಶಾಲಾ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಸುಮಾರು 6000 ಜನ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಏಕಲವ್ಯ ಮಾದರಿ ವಸತಿ ಶಾಲೆಯು ಕೇಂದ್ರ ಸರ್ಕಾರ ನಡೆಸುತ್ತಿರುವ ಶಾಲೆಗಳಾಗಿದ್ದು, 20 ಕೋಟಿ ವೆಚ್ಚ ಅನುದಾನದಲ್ಲಿ ಸದರಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಈ ಬಾರಿ ಆಯೋಜಿಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅವರು ಸೂಚಿಸಿದರು.ಅಂದಾಜು 5 ಕ್ರೀಡಾಂಗಣಗಳಲ್ಲಿ, ಏಕಕಾಲದಲ್ಲಿ ಕ್ರೀಡಾ ಸ್ಪರ್ಧೆಗಳು ಜರುಗಲಿದ್ದು, ಕ್ರೀಡಾಪಟುಗಳ ಸಂಚಾರಕ್ಕೆ ವಾಹನಗಳನ್ನು ಒದಗಿಸುವ ಕುರಿತು, ಕ್ರೀಡಾಂಗಣಗಳ ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪೋಲಿಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಅವರು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಮಾತನಾಡಿ, ಕ್ರೀಡಾಕೂಟದಲ್ಲಿ 10 ಗುಂಪು ಕ್ರೀಡಾ ಸ್ಪರ್ಧೆಗಳನ್ನು ಹಾಗೂ 18 ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕ್ರೀಡೆ ನಡೆಯುವ ಸ್ಥಳ, ಸಮಯ, ಕೆಲಸಗಳಿಗೆ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳ ವಿವರ ಎಲ್ಲವನ್ನು ಮುಂಚಿತವಾಗಿಯೇ ತಲುಪಿಸುವ ವ್ಯವಸ್ಥೆ ಆಗುತ್ತದೆ. ಈಗಾಗಲೇ 3500 ಮಕ್ಕಳಿಗೆ ವಿಮೆ ಮಾಡಿಸಲಾಗಿದೆ. ಕ್ರೀಡಾಕೂಟದಲ್ಲಿ ಕೋವಿಡ್ ಸೂಚನೆಗಳನ್ನು ಪಾಲಿಸಲಾಗುವುದು. ಪ್ರತಿಯೊಂದು ರಾಜ್ಯಕ್ಕೂ ನೋಡಲು ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
ಜ.15 ರಂದು ನೈಜ ದುರ್ಬಲ ಬುಡಕಟ್ಟು ಜನಾಂಗದವರ ಜೊತೆ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದೆ. ಪ್ರಧಾನ ಮಂತ್ರಿಗಳು ನೈಜ ದುರ್ಬಲ ಬುಡಕಟ್ಟು ಜನಾಂಗದ (ಜೇನು ಕುರುಬ ಮತ್ತು ಕೊರಗ) ಜನರ ಜೊತೆ ನೇರ ಸಂಭಾಷಣೆ ನಡೆಸುವರು ಎಂದರು.
ಈ ಕುರಿತು ಪ್ರಧಾನ ಮಂತ್ರಿಗಳು ನಡೆಸಲಿರುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ 50 ರಿಂದ 75 ಆದಿವಾಸಿ ಜನರು ಭಾಗವಹಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.