- ಹೊಸವರ್ಷದ ಸಂಭ್ರಮಾಚರಣೆಗೆ ನಗರದಲ್ಲಿ ಸಿದ್ಧತೆ
- ಯಾವುದೇ ಸಮಾರಂಭವಿರಲಿ ಅಲ್ಲಿ ಕಾಣಸಿಗುವುದೇ ಈ ಕೇಕ್- ಕಳೆದ ವರ್ಷಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಮಾರಾಟವಾಗುವ ನಿರೀಕ್ಷೆ
ಅಜೀಜಅಹ್ಮದ ಬಳಗಾನೂರಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಎಲ್ಲರೂ ಹೊಸ ವರ್ಷ 2024ನ್ನು ಸ್ವಾಗತಿಸುವ ಸಿದ್ಧತೆಯಲ್ಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಹೊಸವರ್ಷದ ಸ್ವಾಗತಕ್ಕಾಗಿ 40 ಟನ್ ಕೇಕ್ ಮಾರಾಟವಾಗುತ್ತಿದೆ!ಹೊಸ ವರ್ಷವನ್ನು ಸ್ವಾಗತಿಸಿಕೊಳ್ಳಲು ಕಳೆದ ಒಂದು ವಾರದಿಂದ ದೊಡ್ಡ ದೊಡ್ಡ ಹೊಟೇಲ್, ಮಾಲ್, ಕಂಪನಿಗಳಲ್ಲಿ ಹೀಗೆ ಎಲ್ಲೆಡೆಯು ಸಿದ್ಧತೆ ಜೋರಾಗಿ ನಡೆಯುತ್ತಿದೆ. ಇನ್ನೂ ಕೆಲವೆಡೆ ಮನೆಗಳಲ್ಲೂ ಕುಟುಂಬದ ಸದಸ್ಯರು, ಸ್ನೇಹಿತರು, ಬಂಧು-ಬಾಂಧವರು ಸೇರಿಕೊಂಡು ಮಧ್ಯರಾತ್ರಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಸ್ವಾಗತಿಸುವುದು ಸರ್ವೇ ಸಾಮಾನ್ಯವಾಗಿದ್ದು, ಇದಕ್ಕೆ ಬೇಕಾದ ಅಗತ್ಯ ತಯಾರಿಯಲ್ಲಿ ಜನತೆ ನಿರತವಾಗಿದೆ.
40 ಟನ್ ಕೇಕ್ ಮಾರಾಟ:ಹುಬ್ಬಳ್ಳಿ-ಧಾರವಾಡದಲ್ಲಿ ಹೊಸವರ್ಷಾಚರಣೆಗಾಗಿ ಸುಮಾರು 40 ಟನ್‌ಗೂ ಅಧಿಕ ಕೇಕ್ ತಯಾರಾಗುತ್ತಿವೆ. ಮಹಾನಗರದಲ್ಲಿ ಒಟ್ಟು 500ಕ್ಕೂ ಅಧಿಕ ಬೇಕರಿಗಳಿವೆ. ಇವುಗಳಲ್ಲಿ 300 ನೋಂದಣಿಯಾಗಿವೆ. ಕಳೆದ ಒಂದು ವಾರದಿಂದ ಹೊಸವರ್ಷಕ್ಕೆ ಬೇಕಾದ ಕೇಕ್ ತಯಾರಿಕೆಗೆ ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ.
ಅರ್ಧ ಕೆಜಿಯಿಂದ ಆರಂಭ:ಬೇಕರಿಗಳಲ್ಲಿ ಬಗೆಬಗೆಯ ಬಣ್ಣಗಳಲ್ಲಿ, ಆಕರ್ಷಕವಾದ ಕೇಕ್‌ಗಳ ತಯಾರಿಕೆಗೆ ನೌಕರರು ಸಿದ್ಧತೆ ನಡೆಸಿದ್ದಾರೆ. ಗ್ರಾಹಕರ ಯೋಗ್ಯತೆಯ ಅನುಸಾರ ಅರ್ಧ ಕೆಜಿಯಿಂದ ಹಿಡಿದು 30ಕೆಜಿ ವರೆಗೂ ಹೀಗೆ ವಿವಿಧ ಆಕಾರಗಳಲ್ಲಿ ತಯಾರಿಸಲಾಗುತ್ತಿದೆ.
ಈ ವರ್ಷ ಮಾರಾಟ ಹೆಚ್ಚಳ:ಕಳೆದ ವರ್ಷಕ್ಕಿಂತ ಈ ವರ್ಷ ಕೇಕ್ ಮಾರಾಟದಲ್ಲಿ ಹೆಚ್ಚಿನ ವ್ಯಾಪಾರವಾಗುವ ನಿರೀಕ್ಷೆ ಹೊಂದಲಾಗಿದೆ. ಹಿಂದೆ 2 ವರ್ಷಗಳ ಕಾಲ ಕೋವಿಡ್‌ನಿಂದ ಸಂಕಷ್ಟ ಅನುಭವಿಸಿದ್ದ ಜನತೆ ಕಳೆದ ವರ್ಷ ಯಾವುದೇ ನಿರ್ಬಂಧ ಇಲ್ಲದಿದ್ದರೂ ವ್ಯಾಪಾರ, ವಹಿವಾಟಿನಲ್ಲಿ ಕೊಂಚ ಇಳಿಕೆಯಾಗಿತ್ತು. ಈ ಬಾರಿ ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ, ವ್ಯಾಪಾರ, ವಹಿವಾಟಿನಲ್ಲಿ ಏರಿಕೆಯಾಗಲಿದೆ ಎಂಬುದು ಬೇಕರಿ ಮಾಲೀಕರ ಅಭಿಪ್ರಾಯ.
ಭಾನುವಾರ ಸಂಭ್ರಮಾಚರಣೆ:ವರ್ಷದ ಕೊನೆಯ ದಿನ ಭಾನುವಾರ ಬಂದಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕೊಂಚ ಹೆಚ್ಚಾಗಿಯೇ ಕಂಡುಬರುತ್ತಿದೆ. ವಾರದ ಕೊನೆಯ ದಿನವಾದ ಭಾನುವಾರದಂದು ಎಲ್ಲ ಸರ್ಕಾರಿ ಕಚೇರಿಗಳು, ಕಂಪೆನಿಗಳು, ಉದ್ಯಮಗಳು ಬಂದಾಗಿರುತ್ತವೆ. ಅಂದು ಮಧ್ಯರಾತ್ರಿಯೇ ಆಚರಿಸುತ್ತಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ಏರಿಕೆ ಕಾಣಲಿದೆ.
ಬಗೆಬಗೆಯ ಕೇಕ್‌ಗಳು:ಚಾಕ್ಲೇಟ್ ಕೇಕ್, ವೆನಿಲಾ ಕೇಕ್, ಸ್ಟ್ರಾಬರಿ, ಆರಂಜ್, ಕ್ರೀಮ್, ಫ್ಲಾವರ್, ಹನಿ, ಜೆಮ್ ಪೇಸ್ಟ್, ಜಾಮೂನ್, ರೌಂಡ್ ಕೇಕ್, ಸ್ಲೈಸ್ ಕೇಕ್, ಬಟ್ಟರ್ ಕ್ರೀಮ್ ಕೇಕ್ ಸೇರಿದಂತೆ ಹಲವು ಬಗೆಬಗೆಯ ಕೇಕ್ ತಯಾರಿಸಲಾಗುತ್ತದೆ. ಕೆಜಿಗೆ ₹350ರಿಂದ ₹400ರ ವರೆಗೆ, ಪೇಸ್ಟ್ರಿ ಕೇಕ್ ಕೆಜಿಗೆ ₹500ರಿಂದ ₹900ರ ವರೆಗೆ ಮಾರಾಟ ಮಾಡಲಾಗುತ್ತಿದೆ.
ಕೇಕ್ ಮೊದಲೇ ಮಾಡಿ ಇಡಲು ಆಗುವುದಿಲ್ಲ. ತಯಾರಿಸಿದ ಒಂದೆರಡು ದಿನದಲ್ಲಿ ಮಾರಾಟ ಮಾಡಬೇಕು. ಯಾರು ಮೊದಲು ಬಂದು ಬುಕ್ ಮಾಡಿ ಹೋಗಿರುತ್ತಾರೆಯೋ ಅಂತಹವರಿಗೆ ಕೇಕ್ ತಯಾರಿಸಿ ಕೊಡುತ್ತೇವೆ. ಈ ಬಾರಿ ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಹು-ಧಾ ಬೇಕರಿ ಮತ್ತು ಸಿಹಿ ಸ್ಟಾಲ್ ಸಂಘದ ಅಧ್ಯಕ್ಷ ರವಿ ಅಯ್ಯಂಗಾರ.