ಗರ್ಭಿಣಿಯರಿಗೆ 12 ವಾರದೊಳಗೆ ತಾಯಿ ಕಾರ್ಡ್ ನೀಡಿ

KannadaprabhaNewsNetwork | Published : Dec 31, 2023 1:31 AM

ಸಾರಾಂಶ

ಗರ್ಭಿಣಿಯರಿಗೆ 12 ವಾರಗಳಲ್ಲಿ ತಾಯಿ ಕಾರ್ಡ್ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗೀಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಸೂಚನೆ ನೀಡಿದ್ದಾರೆ.

ಬಳ್ಳಾರಿ: ಗರ್ಭಿಣಿಯೆಂದು ತಿಳಿದ ಕೂಡಲೇ 12 ವಾರದೊಳಗೆ ಸಂಬಂಧಿತ ಗರ್ಭಿಣಿಗೆ ತಾಯಿ ಕಾರ್ಡ್ ಒದಗಿಸುವ ಜತೆಗೆ ಕಾರ್ಡ್‍ನಲ್ಲಿ ನಮುದಾಗಿರುವ ಮಾಹಿತಿಯನ್ನು ತಿಳಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲ್ಬುರ್ಗಿ ವಿಭಾಗೀಯ ಸಹ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರಿ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗರ್ಭಿಣಿಯವರಿಗೆ ಸಕಾಲದಲ್ಲಿ ತಾಯಿ ಕಾರ್ಡ್ ಒದಗಿಸುವ ಮೂಲಕ ಅವರ ಆಧಾರ್ ಮತ್ತು ಬ್ಯಾಂಕ್ ಮಾಹಿತಿ ಕ್ರೋಡೀಕರಿಸಿ ಹೆರಿಗೆ ಪೂರ್ವದಲ್ಲಿ ಸಿಗುವ ಎಲ್ಲ ಚುಚ್ಚುಮದ್ದುಗಳು, ಕಬ್ಬಿಣ ಅಂಶ ಮಾತ್ರೆಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ರಕ್ತಹೀನತೆಯನ್ನು ನಿಯಂತ್ರಿಸಿ, ಸಹಜ ಹೆರಿಗೆಗೆ ಅಗತ್ಯ ಇರುವ ಸಿದ್ಧತೆ ಕೈಗೊಳ್ಳಲು ತಿಳಿಸಿದರು.ಜನನದ ಆನಂತರ ಮಗುವಿಗೆ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ಸಂಪೂರ್ಣವಾಗಿ ಒದಗಿಸಲು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ. ರಮೇಶ್ ಬಾಬು ಮಾತನಾಡಿ, ನವಂಬರ್ ತಿಂಗಳಿನಿಂದ ಇಲ್ಲಿಯವರೆಗೆ ತಾಯಿ ಮರಣವಾಗಿಲ್ಲ. ಹೆರಿಗೆ ನಿರೀಕ್ಷಿತ ದಿನಾಂಕ ಇರುವವವರಿಗೆ ಸಂಪರ್ಕ ಕೈಗೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಮತ್ತು ಆಸ್ಪತ್ರೆಗೆ ಹೆರಿಗೆಗಾಗಿ ಬಂದಾಗ ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿ ಮೇಲ್ವಿಚಾರಣೆ ಕೈಗೊಂಡು ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವಾಗ ಜವಾಬ್ದಾರಿಯುತ ಸಿಬ್ಬಂದಿ, ಆಶಾ ಕಾರ್ಯಕರ್ತೆಯನ್ನು ಕಳುಹಿಸಿಕೊಂಡುವುದರಿಂದ ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ ಗರ್ಭಿಣಿ ಅವಧಿಯ ಆರಂಭಿಕ ತಿಂಗಳುಗಳಲ್ಲಿ ರಕ್ತಸ್ರಾವ, ಮಗುವಿನ ಚಲನೆ ಇಲ್ಲದಿದ್ದರೆ, ಇತರೆ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದು ಸ್ಕ್ಯಾನಿಂಗ್ ಮಾಡಿಸಿ ಸಮಸ್ಯೆಯನ್ನು ಗುರ್ತಿಸಲು ಸಹಕರಿಸಲು ಹೆಚ್ಚು ಮಾಹಿತಿ ಪ್ರಚಾರಕ್ಕೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.ಕೋವಿಡ್ ನಿರ್ವಹಣೆಗೆ ಸಿದ್ಧತೆ ಕೋವಿಡ್ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಿದ್ಧತೆ, ಆಕ್ಸಿಜನ್ ಸಂಪರ್ಕ ಸಮರ್ಪಕವಾಗಿದ್ದು, ಪ್ರತಿ ದಿನ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇರುವವರನ್ನು ಗುರ್ತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರುವ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಅನಿಲ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ. ರಾಮ ಶೆಟ್ಟಿ, ಡಾ. ಗುರುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಈರಣ್ಣ, ಡಾ. ಭರತ್, ಡಾ. ಅರುಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೆಂಕೋಬ ನಾಯ್ಕ್ ಉಪಸ್ಥಿತರಿದ್ದರು.ಗರ್ಭಿಣಿಯೆಂದು ತಿಳಿದ ಕೂಡಲೇ 12 ವಾರದೊಳಗೆ ಸಂಬಂಧಿತ ಗರ್ಭಿಣಿಗೆ ತಾಯಿ ಕಾರ್ಡ್ ಒದಗಿಸುವ ಜೊತೆಗೆ ಕಾರ್ಡ್‍ನಲ್ಲಿ ನಮುದಾಗಿರುವ ಮಾಹಿತಿಯನ್ನು ತಿಳಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲ್ಬುರ್ಗಿ ವಿಭಾಗೀಯ ಸಹ ನಿರ್ದೇಶಕ ಡಾ.ಶಂಕ್ರಪ್ಪ ಮೈಲಾರಿ ತಿಳಿಸಿದರು.

Share this article