ಪುರಸಭೆ ಉಪಾಧ್ಯಕ್ಷರಾಗಿ ಎಲ್ ಅಶೋಕ್ ಆಯ್ಕೆ

KannadaprabhaNewsNetwork | Published : Sep 9, 2024 1:31 AM

ಸಾರಾಂಶ

ಪಾಂಡವಪುರ ಬಿಜೆಪಿ ಕಚೇರಿಯಲ್ಲಿ ಪುರಸಭೆ ನೂತನ ಉಪಾಧ್ಯಕ್ಷ ಎಲ್.ಅಶೋಕ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಬಿಜೆಪಿ ಸದಸ್ಯ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೈತ್ರಿಧರ್ಮ ಪಾಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪುರಸಭೆ ನೂತನ ಉಪಾಧ್ಯಕ್ಷ ಎಲ್.ಅಶೋಕ್ ಅವರನ್ನು ಅಭಿನಂಧಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಬಿಜೆಪಿ ಅಭ್ಯರ್ಥಿ ಎಲ್.ಅಶೋಕ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ಎನ್‌ಡಿಎ ಮೈತ್ರಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ದೊಡ್ಡ ಸಂದೇಶವನ್ನು ನೀಡಿದ್ದಾರೆ. ಇದಕ್ಕೆ ಕಾರಣರಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಎನ್‌ಡಿಎ ಮೈತ್ರಿ ಬಳಿಕ ಜಿಲ್ಲೆಯಲ್ಲಿ ನಮಗೆ ಸೋಲೆ ಎದುರಾಗಿಲ್ಲ. ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಎನ್‌ಡಿಎ ಮೈತ್ರಿ ಬಲಿಷ್ಠವಾಗಿದೆ ಎಂಬುದನ್ನು ಕಳೆದ ಲೋಕಸಭೆ, ವಿಧಾನಪರಿಷತ್, ಮಂಡ್ಯ ನಗರ ಸಭೆ ಸೇರಿದಂತೆ ಹಲವು ಚುನಾವಣೆಗಳಲ್ಲಿ ತೋರ್ಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಅಭಿವೃದ್ದಿಪರವಾಗಿ ಕೆಲಸ ಮಾಡುವ ಜನರ ವಿಶ್ವಾಸಗಳಿಸುವ ಕೆಲಸ ಮಾಡಲಿದ್ದೇವೆ ಎಂದರು.ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್ ಮಾತನಾಡಿ, ಎನ್‌ಡಿಎ ಮೈತ್ರಿ ಧರ್ಮನಿಷ್ಠೆಯಿಂದ ಬಿಜೆಪಿ ಸದಸ್ಯನಾದ ನನ್ನನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಹಕಾರ ಹಾಗೂ ಅಧ್ಯಕ್ಷರು, ಎಲ್ಲಾ ಸದಸ್ಯರ ಜತೆಗೂಡಿ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.ಈ ವೇಳೆ ಬಿಜೆಪಿ ಅಧ್ಯಕ್ಷ ಧನಂಜಯ್, ಮಹಿಳಾ ಜಿಲ್ಲಾಧ್ಯಕ್ಷೆ ಮಂಗಳ ನವೀನ್‌ಕುಮಾರ್, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಎಸ್‌ಎನ್‌ಟಿ ಸೋಮಶೇಖರ್, ಚಿಕ್ಕಮರಳಿ ನವೀನ್, ಸೋಮಶೇಖರ್, ಆನಂದ, ಶ್ರೀನಿವಾಸ್‌ನಾಯ್ಕ, ಶ್ರೀಧರ,ಚನ್ನೇಗೌಡ, ಡೇರಿರಾಮು, ನಂದೀಶ್ ಸೇರಿದಂತೆ ಹಲವರು ಹಾಜರಿದ್ದರು.

Share this article