ಎಸ್. ನಾರಾಯಣ್ ಮುನಿರಾಬಾದ್
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 52 ಟಿಎಂಸಿಯಷ್ಟು ನೀರಿನ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 62 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ನೀರಿನ ಒಳ ಹರಿವು 60,000 ಕ್ಯುಸೆಕ್ ಇತ್ತು. ಆದರೆ ಈ ವರ್ಷ ಜಲಾಶಯದಲ್ಲಿ 9.5 ಟಿಎಂಸಿಯಷ್ಟು ನೀರು ಮಾತ್ರ ಇದೆ. ಜೂನ್ ಮೊದಲ ವಾರವೂ ಇಷ್ಟೇ ನೀರಿತ್ತು. ಜಲಾಶಯದ ನೀರಿನ ಮಟ್ಟ 1688 ಅಡಿ ಇದ್ದು, ಜೂನ್ ಕೊನೆಯ ವಾರದಲ್ಲಿ ಸಹ ನೀರಿನ ಮಟ್ಟ ಅಷ್ಟೇ ಇದೆ. 1 ಅಡಿಯೂ ಏರಿಕೆ ಆಗಿಲ್ಲ.
ಶೂನ್ಯಕ್ಕೆ ತಲುಪಿದ ಒಳಹರಿವು: ಕಳೆದ 8 ದಿನಗಳಿಂದ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಅಂದರೆ ಜಲಾಶಯಕ್ಕೆ ಒಂದು ಹನಿ ನೀರು ಹರಿದು ಬರುತ್ತಿಲ್ಲ, ಇದು ಪರಿಸ್ಥಿತಿಯ ಭೀಕರತೆ ತೋರಿಸುತ್ತದೆ. ಈ ಬೆಳವಣಿಗೆ ರೈತರಲ್ಲಿ ಆತಂಕವನ್ನುಂಟು ಮಾಡಿದೆ.ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗುತ್ತದೆ, ಆದರೆ ಪ್ರಸಕ್ತ ಜೂ. 1ರಿಂದ ಜೂ. 20ರ ವರೆಗೆ ಜಲಾಶಯಕ್ಕೆ ಪ್ರತಿನಿತ್ಯ 100ರಿಂದ 500 ಕ್ಯುಸೆಕ್ ನೀರು ಮಾತ್ರ ಹರಿದು ಬಂದಿದೆ. ಇದು ಅತ್ಯಂತ ಅಲ್ಪ ಪ್ರಮಾಣದ ಒಳಹರಿವು ಎನ್ನಲಾಗುತ್ತಿದೆ.
ಮುಂಗಾರು ಬೆಳೆಗೆ 120 ಟಿಎಂಸಿ ನೀರು ಬೇಕು. ಅಚ್ಚುಕಟ್ಟು ಪ್ರದೇಶಗಳಾದ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಅನಂತಪುರ ಕರ್ನೂಲ್, ಕಡಪ ಜಿಲ್ಲೆಗಳ ರೈತರ ಮುಂಗಾರು ಬೆಳೆಗಳಿಗೆ ಸುಮಾರು 120 ಟಿಎಂಸಿ ನೀರು ಅಗತ್ಯವಿರುತ್ತದೆ, ಆದರೆ ಜಲಾಶಯದಲ್ಲಿ ಕೇವಲ 9.5 ಟಿಎಂಸಿ ಇದೆ. ಈ ಬಾರಿ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗೆ ನೀರು ದೊರೆಯುವುದೇ ಎನ್ನುವ ಪ್ರಶ್ನೆಗೆ ಮಳೆರಾಯನೇ ಉತ್ತರ ನೀಡಬೇಕಾಗಿದೆ.