ಕೂಡ್ಲಿಗಿ: ಆಳವಾದ ಸೇತುವೆಯ ಗುಂಡಿಗೆ ಕಾರೊಂದು ಮಗುಚಿ ವೃದ್ಧ ದಂಪತಿ ಮೃತಪಟ್ಟ ಘಟನೆ ಕೂಡ್ಲಿಗಿ ಸಮೀಪದ ವಿರುಪಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಬೆಂಗಳೂರಿನ ಸುಬ್ಬಣ್ಣಪಾಳ್ಯದ ಶ್ರೀನಿವಾಸ ರಾವ್ (70), ಪತ್ನಿ ರತ್ನಭಾಯಿ (65) ಮೃತರು.
ಅಳಿಯನ ಜನ್ಮದಿನದ ಪ್ರಯುಕ್ತ ಹಂಪಿ, ಅಂಜನಾದ್ರಿ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬೆಂಗಳೂರಿನಿಂದ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೂಡ್ಲಿಗಿ ಸೇತುವೆಯ ಗುಂಡಿಗೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ವೃದ್ಧ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಈಕೆಯ ಪತಿ ತೀವ್ರ ಗಾಯಗೊಂಡು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಪಕ್ಕದ ಜಮೀನಿನಲ್ಲಿದ್ದವರು, ಹೈವೇ ಪೆಟ್ರೋಲಿಂಗ್, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.