ಕಾರ್ಖಾನೆಯ ಮಾಲಿನ್ಯದಿಂದ ಕೃಷಿ ವಲಯಕ್ಕೆ ಬಿಕ್ಕಟ್ಟು; ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Mar 08, 2026, 02:00 AM IST
ಮರಬ್ಬಿಹಾಳು ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರು ಮತ್ತು ಕೃಷಿ ಕಾರ್ಮಿಕರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎನ್‌ಡಿಕೆ ಪ್ಲಾಂಟ್ ಜೆಎಸ್‌ಡಬ್ಲು ಕಾರ್ಖಾನೆಯ ಮಾಲಿನ್ಯದಿಂದಾಗಿ ಸುತ್ತಲಿನ ಏಳು ಗ್ರಾಮಗಳ ರೈತರ ಕೃಷಿ ವಲಯ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ನಾರಾಯಣದೇವರ ಕೆರೆ ಗ್ರಾಮದ ಬಳಿಯ ಎನ್‌ಡಿಕೆ ಪ್ಲಾಂಟ್ ಜೆಎಸ್‌ಡಬ್ಲು ಕಾರ್ಖಾನೆಯ ಮಾಲಿನ್ಯದಿಂದಾಗಿ ಸುತ್ತಲಿನ ಏಳು ಗ್ರಾಮಗಳ ರೈತರ ಕೃಷಿ ವಲಯ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಕೃಷಿ ಕಾರ್ಮಿಕರ ಆರೋಗ್ಯ ಅಪಾಯಕಾರಿ ಹಂತದಲ್ಲಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಮತ್ತು ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಯ ಮಾಲಿನ್ಯವನ್ನು ಹತೋಟಿಗೆ ತರಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಶುಕ್ರವಾರ ರೈತರ ನಿಯೋಗ ಮನವಿ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ತುಂಗಭದ್ರಾ ಹಿನ್ನೀರಿನ ಸನಿಹದ ಮರಬ್ಬಿಹಾಳು ಗ್ರಾಪಂ ವ್ಯಾಪ್ತಿಯ ವರದಾಪುರ, ನಾರಾಯಣದೇವರಕೆರೆ, ಕೆಂಚಟನಹಳ್ಳಿ, ಮರಬ್ಬಿಹಾಳು, ಮರಬ್ಬಿಹಾಳು ತಾಂಡಾ, ಕೆಂಚಟನಹಳ್ಳಿ ತಾಂಡಾ, ಕೋಳಿಫಾರ್ಮ್‌ ಕಾಲನಿ ಗ್ರಾಮಗಳ ರೈತರು ನೀರಾವರಿ ಸಹಿತ ಕೃಷಿಯೋಗ್ಯ ಭೂಮಿ ಹೊಂದಿದ್ದು, ಕಾರ್ಖಾನೆ ಉಗುಳುವ ಕಪ್ಪು ಧೂಳಿನಿಂದಾಗಿ ರೈತರ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿವೆ ಎಂದು ದೂರಿದರು.

ಕಾರ್ಖಾನೆಯ ಧೂಳಿನಿಂದಾಗಿ ತೋಟಗಾರಿಕೆ ಬೆಳೆಗಳು ಸೇರಿದಂತೆ ಶೇಂಗಾ, ಮೆಕ್ಕೆಜೋಳ, ಕಬ್ಬು, ಭತ್ತದ ಬೆಳೆಗಳಲ್ಲಿ ಸರಿಯಾದ ಪರಾಗಸ್ಪರ್ಷ ಕ್ರಿಯೆ ನಡೆಯದೇ ಇಳುವರಿಯಲ್ಲಿ ಕುಂಠಿತವಾಗಿದೆ. ಇದರಿಂದ ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಕೃಷಿ ಕಾರ್ಮಿಕರು ಧೂಳಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್‌ ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಕಣ್ಣು, ಶ್ವಾಸಕೋಶಗಳ ಆರೋಗ್ಯಕ್ಕೆ ತೀವ್ರ ಧಕ್ಕೆಯಾಗುತ್ತಿದೆ ಎಂದು ಕಿಡಿಕಾರಿದರು.

ಮುಖಂಡ ಪಿ.ಸೂರ್ಯಬಾಬು ಮಾತನಾಡಿ, ಹೊಸಪೇಟೆ-ಹರಿಹರ ಮುಖ್ಯ ರಸ್ತೆಯಿಂದ ನಾರಾಯಣದೇವರ ಕೆರೆ ರಸ್ತೆ ಬಳಸಿ ಕಾರ್ಖಾನೆಗೆ ತೆರಳುವ ಗಣಿ ಲಾರಿಗಳ ಓಡಾಟದಿಂದ ಇದೇ ರಸ್ತೆಯ ಮೂಲಕ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಕಬ್ಬು ಕಟಾವು ಮಾಡಿಕೊಂಡು ಬೇರೆಡೆಗೆ ಸಾಗಿಸುವ ರೈತರಿಗೆ ರಸ್ತೆಯುದ್ದಕ್ಕೂ ನಿಲ್ಲುವ ಗಣಿ ಲಾರಿಗಳಿಂದ ಸುಗುಮ ಸಂಚಾರ ಕನಸಾಗಿದೆ. ಇಡೀ ಪ್ರದೇಶದ ಮಾಲಿನ್ಯದಿಂದಾಗಿ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಉಸಿರಾಟಕ್ಕೆ ಯೋಗ್ಯ ಗಾಳಿ ಕನ್ನಡಿಯೊಳಗಿನ ಗಂಟು ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಖಾನೆಯ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮರಬ್ಬಿಹಾಳು ಗ್ರಾಪಂನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕಾರ್ಖಾನೆಗೆ ನೋಟಿಸ್ ನೀಡಿದ್ದರೂ ಫಲಕಾರಿಯಾಗದೇ ರೈತರ ಸಂಕಷ್ಟ ಮುಂದುವರೆದಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಕಾರ್ಖಾನೆಯ ಮಾಲಿನ್ಯ ನಿಯಂತ್ರಿಸಿ ಈ ಭಾಗದ ರೈತರ , ಕೃಷಿ ಕಾರ್ಮಿಕರ ಮತ್ತು ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಮರಬ್ಬಿಹಾಳು ಗ್ರಾಪಂ ಅಧ್ಯಕ್ಷ ಎಲ್.ಶಂಕರ ನಾಯ್ಕ, ರೈತ ಸಂಘದ ಬಿ.ಗೋಣಿಬಸಪ್ಪ, ಟಿ.ತಿಂದಪ್ಪ, ಎಂ.ನಾಗೇಂದ್ರಪ್ಪ, ಬಿ.ನಾಗರಾಜ್, ಟಿ.ಹನುಮಂತ, ಪ್ರಾಶಾಂತ್ ನಿಯೋಗದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಎಸಿ ವ್ಯವಸ್ಥೆಯೇ ಇಲ್ಲ
ಶಿಕ್ಷಣ, ಸಂಸ್ಕೃತಿ ಮತ್ತು ಸಂಸ್ಕಾರ ನೆಮ್ಮದಿ ಕೊಡಬಲ್ಲವು: ತಮ್ಮಯ್ಯ