)
ಕನ್ನಡಪ್ರಭ ವಾರ್ತೆ ಯಶವಂತಪುರ
ಮೈಸೂರು ರಸ್ತೆಯ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಿಂದ 2 ಕಿ.ಮೀ. ದೂರದಲ್ಲಿರುವ ಮಲ್ಹಾರ್ ಅವೆನ್ಯೂ ಬಳಿ ಈ ಘಟನೆ ನಡೆದಿದೆ.
ನಾಗರಾಜು ದಿನನಿತ್ಯದ ಅಭ್ಯಾಸದಂತೆ ಬೆಳಗಿನ 5 ಗಂಟೆ ಸುಮಾರಿಗೆ ಮಗಳು ಶೋಭಾ ಹಾಗೂ ಮೊಮ್ಮಗಳೊಂದಿಗೆ ವಾಯುವಿಹಾರಕ್ಕೆ ತೆರಳಿದ್ದರು. ಮನೆಗೆ ವಾಪಸ್ಸಾಗುವಾಗ ಏಕಾಏಕಿ ಹಿಂದಿನಿಂದ ಬಂದ ಕಾಡಾನೆಯೊಂದು ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಅದೇ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿ ನಡೆದು ಬರುತ್ತಿದ್ದ ಮಗಳು ಹಾಗೂ ಮೊಮ್ಮಗಳಿಗೆ ನಾಗರಾಜು ಆನೆ ದಾಳಿಗೆ ಒಳಗಾಗಿರುವುದು ತಡವಾಗಿ ತಿಳಿದುಬಂದಿದೆ. ಮುಂಜಾನೆ 5.10 ಗಂಟೆಗೆ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಸಿಸಿಟಿವಿಯಲ್ಲಿ ಆನೆಯ ಚಲನವಲನ ಸೆರೆಯಾಗಿದೆ.
ಘಟನೆ ಬೆನ್ನಲ್ಲೇ ಕಗ್ಗಲಿಪುರ ಅರಣ್ಯ ವಲಯ ವ್ಯಾಪ್ತಿ ಸುತ್ತಮುತ್ತ ಆನೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. 100ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ದುರ್ಘಟನೆಯಿಂದ ಕೆಂಗೇರಿ, ಅಂಚೆಪಾಳ್ಯ, ಕಂಬಿಪುರ, ಕಾರುಬೆಲೆ, ಕುಂಬಳಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ಭಾಗದಲ್ಲಿ ಆರು ವರ್ಷಗಳ ಹಿಂದೆ ಆನೆ ದಾಳಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆರು ವರ್ಷಗಳ ಬಳಿಕ ಮತ್ತೊಂದು ದಾಳಿ ನಡೆದಿದೆ. ಕೆಂಗೇರಿ ಸಮೀಪದ ಬಿ.ಎಂ ಕಾವಲು ಪ್ರದೇಶದ ಸುತ್ತಮುತ್ತ ಚಿರತೆ, ಆನೆ ಸಹಿತ ಕಾಡು ಪ್ರಾಣಿಗಳ ಸಂಚಾರದ ಆತಂಕ ಇತ್ತು. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಮಾತನಾಡಿ, ಒಂಟಿ ಆನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರದೇಶದಿಂದ ಬಂದಿರಬಹುದು. ಕಗ್ಗಲಿಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಆನೆ ಪತ್ತೆ ಹಾಗೂ ಸೆರೆಗೆ ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ. ಬೆಂಗಳೂರು ನಗರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಹಾಗೂ ರಾಮನಗರ ವಿಭಾಗಗಳ 100ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದುಬಾರೆ ಶಿಬಿರದಿಂದ 4 ಕುಮ್ಕಿ ಆನೆಗಳನ್ನು ತರಿಸಿ ಕಾರ್ಯಾಚರಣೆ ನಡೆಸಲಾಗುವುದು. ಆನೆಯನ್ನು ಬಿಎಂ ಕಾವಲು ಅರಣ್ಯ ಪ್ರದೇಶದಿಂದ ಸುರಕ್ಷಿತವಾಗಿ ಸ್ಥಳಾಂತರ ಮಾಡುವವರೆಗೂ ಸಾರ್ವಜನಿಕರು ತಡರಾತ್ರಿ ಹಾಗೂ ಮುಂಜಾನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗೆ ಓಡಾಡಬಾರದು ಎಂದು ಮನವಿ ಮಾಡಿದ್ದಾರೆ.
ನಾಗರಾಜು ಮೃತಪಟ್ಟ ಸುದ್ದಿ ಬೆನ್ನಲ್ಲೇ ಅರಣ್ಯ ಸಚಿವ ರಾಮಲಿಂಗರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಮೃತರ ಕುಟುಂಬಸ್ಥರಿಗೆ 20 ಲಕ್ಷ ರು. ಪರಿಹಾರ ಘೋಷಿಸಿದರು. ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಚಿರತೆ, ಆನೆ ಇತರೆ ಕಾಡು ಪ್ರಾಣಿಗಳ ದಾಳಿಯಿಂದ ಪ್ರತಿ ವರ್ಷ 40-45 ಜನ ಬಲಿಯಾಗುತ್ತಿದ್ದಾರೆ. ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರದಂತೆ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಅನಾಹುತಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು.ದುಬಾರೆ ಆನೆ ಶಿಬಿರದಿಂದ ಆನೆಗಳನ್ನು ಕರೆತಂದು ದುರ್ಘಟನೆಗೆ ಕಾರಣವಾಗಿರುವ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.