ರಾಮಕೃಷ್ಣ ದಾಸರಿ
ಪಕ್ಕದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳನ್ನೊಳಗೊಂಡ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ದಿನೇ ದಿನೆ ಕಾವುಪಡೆದುಕೊಳ್ಳುತ್ತಿದ್ದು, ಇತ್ತ ಜಿಲ್ಲಾಡಳಿತ ಮತದಾನಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ. ಮತ್ತೊಂದು ಕಡೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಎಲ್ಲೆಡೆ ಸಂಚರಿಸಿ ಪ್ರಚಾರ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಇಡೀ ಕ್ಷೇತ್ರದಲ್ಲಿ ಚುನಾವಣಾ ವಾತಾವರಣವು ಬಿರುಸುಗೊಂಡಂತಾಗಿದೆ.
ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡನೇ ಹಂತದಲ್ಲಿ (ಮೇ.7) ಮತದಾನ ನಿಗದಿಗೊಂಡ ಹಿನ್ನೆಲೆಯಲ್ಲಿ ಇಷ್ಟು ದಿನ ಟಿಕೆಟ್ ಹಂಚಿಕೆ, ಪಕ್ಷದ ಸಂಘಟನೆ, ಅಸಮಧಾನದಲ್ಲಿ ಕಾಲಕಳೆದ ಮುಖಂಡರು ಇದೀಗ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಕೊನೆ ಹಂತಕ್ಕೆ ಬಂದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಪೂರ್ವ ತಯಾರಿ ಜೊತೆಗೆ ಕ್ಷೇತ್ರದಲ್ಲಿ ಪ್ರಚಾರ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಇಷ್ಟು ದಿನಗಳ ಕಾಲ ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಪಕ್ಷಗಳ ಕಾರ್ಯಕರ್ತರ, ಮುಖಂಡರ, ಮಠ-ಮಸೀದಿ, ಚರ್ಚೆಗಳಿಗೆ ಭೇಟಿ ನೀಡಿದ ಅಭ್ಯರ್ಥಿಗಳು ಇದೀಗ ಬಹಿರಂಗ ಸಭೆಗಳನ್ನು ನಡೆಸುತ್ತಿದ್ದಾರೆ.
ಕಳೆದ ಏ.12 ರಂದು ಲೋಕಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಂದಿನಿಂದ ಮಂಗಳವಾರದ ತನಕ ಕೇವಲ 5 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಉಮೇದುವಾರಿಕೆ ಸಲ್ಲಿಕೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿಯಿದ್ದು ನಾಮಪತ್ರಗಳ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ಇದೇ ಏ.18 ರಂದು ನಾಮಪ್ರ ಸಲ್ಲಿಸಲು ತೀರ್ಮಾನಗೊಂಡಿದ್ದಾರೆ. ಅದೇ ದಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸಹ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರೊಂದಿಗೆ ಸೇರಿ ಮತ್ತೊಮ್ಮೆ ನಾಮಪತ್ರಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸಿಂಧನೂರು-ಮಸ್ಕಿಯಲ್ಲಿ ಚುರುಕು