ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಬಾಂಡ್ ವೈಯಕ್ತಿಕವಲ್ಲ. ಪಾರ್ಲಿಮೆಂಟ್ ನಲ್ಲಿ ಪಾಸ್ ಮಾಡಿ ಆಯೋಗದ ಗಮನಕ್ಕೂ ತರಲಾಗಿದೆ. ಆದರೆ, ಇದೀಗ ಬಿಜೆಪಿ ನಾಯಕರ ಮೇಲೆ ರಾಜಕೀಯ ಕಾರಣದಿಂದಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದೂರಿದರು.
ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಚುನಾವಣಾ ಬಾಂಡ್ ಮೂಲಕ ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಲಾಗಿದೆ. ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳಿಗೆ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೂ ಚುನಾವಣಾ ಬಾಂಡ್ ಸಿಕ್ಕಿದೆ. ಹಿಂದೆ ಕಾಂಗ್ರೆಸ್ಸಿಗರು ಸೂಟ್ ಕೇಸ್ ಮತ್ತು ಮೂಟೆಯಲ್ಲಿ ಕದ್ದು ಮುಚ್ಚಿ ಹಣ ತೆಗೆದುಕೊಳ್ಳುತ್ತಿದ್ದರು ಎಂದು ದೂರಿದರು.ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂಬ ಕಾರಣಕ್ಕೆ ಚುನಾವಣಾ ಬಾಂಡ್ ಜಾರಿಗೆ ತಂದರು. ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದಿದ್ದು ತಪ್ಪೋ ಅಥವಾ ಕದ್ದು ಮುಚ್ಚಿ ಸೂಟ್ಕೇಸ್ ನಲ್ಲಿ ತೆಗೆದುಕೊಳ್ಳುತ್ತಿದ್ದು ತಪ್ಪೋ ಎಂದು ಪ್ರಶ್ನಿಸಿದರು.
ಯಾರಿಗೆ ಎಷ್ಟು ಹೋಗಿದೆ ಎನ್ನುವುದು ಗೊತ್ತಾಗಬಾರದು ಎನ್ನುವುದು ಕಾಂಗ್ರೆಸ್ ಉದ್ದೇಶವಾಗಿದೆ. ಈ ಮೂಲಕ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪಾರದರ್ಶಕ ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ಅನ್ನು ದಾಖಲಿಸಲಾಗಿದೆ. ಪ್ರಕರಣಗಳನ್ನು ನಾವು ಎದುರಿಸುತ್ತೇವೆ. ಇದು ನಮಗೆ ಗೊತ್ತಿದೆ ಎಂದು ಹೇಳಿದರು.ರಾಕ್ಷಸತ್ವಕ್ಕೂ ಒಂದು ಕೊನೆ ಇರುತ್ತದೆ. ನವರಾತ್ರಿಯೇ ದುಷ್ಟ ಶಕ್ತಿಗಳ ದಮನವನ್ನು ಮಾಡುವುದು. ಹಿಂದೆ ರಾಕ್ಷಸರು ತಮಗಿದ್ದ ವರವನ್ನು ದುರುಪಯೋಗ ಮಾಡಿಕೊಂಡಿದ್ದರು. ರಾಜ್ಯದ ಜನ ರಾಜ್ಯಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗೆ ಜನಾದೇಶ ಕೊಟ್ಟಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಕಾಂಗ್ರೆಸ್, ಭ್ರಷ್ಟಾಚಾರ, ಲೂಟಿಗೆ ಇಳಿದು ಇದನ್ನು ಪ್ರಶ್ನಿಸಿದವರ ವಿರುದ್ಧ ಸುಳ್ಳು ಕೇಸು ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೂ ಒಂದು ಅಂತ್ಯವಿದೆ. ಜತೆಗೆ ಆ ಪಕ್ಷಕ್ಕೂ ಒಂದು ಅಂತ್ಯವಿದೆ. ಹಿಂದೆ ರಾಕ್ಷಸರಿಗೆ ಅಂತ್ಯವಾದಂತೆಯೇ ಮುಂದೆ ಕಾಂಗ್ರೆಸ್ ಅಂತ್ಯವಾಗಲಿದೆ. ಈ ರೀತಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡರೆ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ ಎಂದು ಹೇಳಿದರು.ಮೂಡಾ, ಅರ್ಕಾವತಿ, ವಾಲ್ಮೀಕಿ ಹಗರಣದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಸುಳ್ಳು ಕೇಸ್ ದಾಖಲಿಸಲು ಸೂಚಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗೆ ಸುಳ್ಳು ಕೇಸ್ ಅನ್ನು ದಾಖಲಿಸಿ, ಮಾನಹಾನಿ ಆತ್ಮಸ್ಥೈರ್ಯ ಕುಗ್ಗಿಸುವ ರೀತಿ ಕ್ರಮ ಕೈಗೊಳ್ಳುವ ಸೂಚನೆಯನ್ನು ಕಾಂಗ್ರೆಸ್ ನಾಯಕರು ಪೊಲೀಸರಿಗೆ ನೀಡಿದ್ದಾರೆ ಎಂದು ದೂರಿದರು.
ರಾಹುಲ್ ಗಾಂಧಿ ಮೂರ್ಖರ ನಾಯಕಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರ "ರಾಮ ಮಂದಿರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಾಚ್ ಗಾನ ಕಾರ್ಯಕ್ರಮ " ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ ಮೂರ್ಖರ ನಾಯಕ ಎಂದು ಟೀಕಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಇಟ್ಟಿದ್ದೆ ಓರ್ವ ದಲಿತ. ಬಡವರು, ಶ್ರೀಮಂತರು ಎನ್ನದೆ ಎಲ್ಲರೂ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಶ್ರೀರಾಮನನ್ನು ವಿರೋಧಿಸಿ ಕಾಲ್ಪನಿಕ ವ್ಯಕ್ತಿ ಎಂದು ಅಫಿಡವಿಟ್ ಕೊಟ್ಟಿದ್ದಲ್ಲದೆ ರಾಮನೇ ಇಲ್ಲ ಎಂದಿತ್ತು ಎಂದು ದೂರಿದರು. ಮೂರ್ಖರಂತೆ ಮಾತನಾಡುವುದು ರಾಹುಲ್ ಗಾಂಧಿಗೆ ಹೊಸದಲ್ಲ. ಹೀಗಾಗಿ ಅವರನ್ನು ಮೂರ್ಖರ ರಾಜ ಎಂದು ಕರೆಯಬಹುದು. ಅಮೆರಿಕಕ್ಕೆ ಹೋಗಿ ಭಾರತವನ್ನು ತೆಗಳುವುದು ದೇಶಭಕ್ತರು ಮಾಡುವ ಕೆಲಸವಲ್ಲ. ಇದು ರಾಹುಲ್ ಗಾಂಧಿಯಂಥಹ ಮೂರ್ಖರು ಮಾತ್ರ ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.