ಚುನಾವಣೆ ಪ್ರಚಾರಕ್ಕೂ ತಟ್ಟಿದ ಬಿಸಿಲ ಝಳ!

KannadaprabhaNewsNetwork | Updated : Apr 08 2024, 12:28 PM IST

ಸಾರಾಂಶ

 ಲೋಕಸಭೆ ಚುನಾವಣೆ ಪ್ರಚಾರ ಕಾವು ಬೇರೆ ಏರತೊಡಗಿದೆ. ಆದರೆ, ಬಿಸಿಲ ಧಗೆ ಚುನಾವಣೆ ಪ್ರಚಾರಕ್ಕೆ ಹೊಡೆತ ನೀಡಿದಂತೆ ಕಾಣುತ್ತಿದೆ. ಕಾರಣ, ಬಿಸಿಲಿಗೆ ಹೆದರಿ ಚುನಾವಣೆ ಪ್ರಚಾರಕ್ಕೆ ಜನರೇ ಬರುತ್ತಿಲ್ಲ. ಇದರಿಂದ ಚುನಾವಣೆ ಪ್ರಚಾರ ಕಾರ್ಯಕ್ಕೂ ಇದೀಗ ಜನರ ಬರ ಆವರಿಸಿದಂತಾಗಿದೆ.

ಬಸವರಾಜ ನಂದಿಹಾಳ

  ಬಸವನಬಾಗೇವಾಡಿ :  ಒಂದೆಡೆ ಬರ, ಇನ್ನೊಂದೆಡೆ ದಾಖಲೆಯ ಪ್ರಮಾಣದಲ್ಲಿ ತಾಪಮಾನ. ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕಾವು ಬೇರೆ ಏರತೊಡಗಿದೆ. ಆದರೆ, ಬಿಸಿಲ ಧಗೆ ಚುನಾವಣೆ ಪ್ರಚಾರಕ್ಕೆ ಹೊಡೆತ ನೀಡಿದಂತೆ ಕಾಣುತ್ತಿದೆ. ಕಾರಣ, ಬಿಸಿಲಿಗೆ ಹೆದರಿ ಚುನಾವಣೆ ಪ್ರಚಾರಕ್ಕೆ ಜನರೇ ಬರುತ್ತಿಲ್ಲ. ಇದರಿಂದ ಚುನಾವಣೆ ಪ್ರಚಾರ ಕಾರ್ಯಕ್ಕೂ ಇದೀಗ ಜನರ ಬರ ಆವರಿಸಿದಂತಾಗಿದೆ.

ಈ ಬಾರಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಮಳೆ ಇಲ್ಲದ ಕಾರಣಕ್ಕೆ ಈ ಬಾರಿ ಬಿಸಿಲ ಧಗೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಹೀಗಾಗಿ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇನ್ನೂ ಮನೆಯಿಂದ ಹೊರಗೆ ಹೋಗಬೇಕಾದರೆ ಜನರು ಕೊಡೆ ಹಿಡಿದುಕೊಂಡೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಬಿಸಿಲಲ್ಲೇ ಓಡಾಡಿ ಪ್ರಚಾರ ಮಾಡುವ ಚುನಾವಣೆ ಬಂದು ನಿಂತಿದೆ. ಹೀಗಾಗಿ ಚುನಾವಣೆ ಪ್ರಚಾರ ಕಾರ್ಯಕ್ಕೆ ಜನರು ಕಾರ್ಯಕರ್ತರು ಹೆಚ್ಚಾಗಿ ಆಗಮಿಸದ ಕಾರಣಕ್ಕೆ ಚುನಾವಣೆ ಪ್ರಚಾರವೇ ಕಳೆಗುಂದಿದಂತೆ ಕಾಣುತ್ತಿದೆ.

ಬಸವನಬಾಗೇವಾಡಿಯಲ್ಲಿ 40 ಡಿಗ್ರಿಯಷ್ಟು ಬಿಸಿಲು ಬಂದು ತಲುಪಿದೆ. ಬಿಸಿಗಾಳಿಯೇ ಹೆಚ್ಚಾಗಿ ಕಂಡುಬರುತ್ತಿದೆ. ಮಾರ್ಚ್ ಮುಗಿದು ಏಪ್ರಿಲ್ ಮೊದಲ ವಾರದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಳವಾಗಿದೆ. ಒಂದೆಡೆ ಸುಡು ಬಿಸಿಲಿನ ಬೇಗೆಯಿಂದ ಬಸವಳಿದ ಜನರು ತಂಪುಪಾನೀಯ, ಹಣ್ಣುಗಳತ್ತ ಮೊರೆ ಹೋಗುತ್ತಿದ್ದಾರೆ. ಚುನಾವಣೆ ಕಾರ್ಯದಲ್ಲಿ ತೊಡಗಿಕೊಂಡುವರು ಆಗಾಗ ತಂಪು ಪಾನಿಯ ಸೇವಿಸುತ್ತಾ ಪ್ರಚಾರ ಮಾಡುತ್ತಿರುವುದು ಕಂಡು ಬರುತ್ತಿದೆ.

ಒಳಾಂಗಣಕ್ಕೆ ಒತ್ತು:

ಬಿಸಿಲಿನ ತಾಪದಿಂದಾಗಿ ಪ್ರಚಾರ ಸಭೆ, ಸಮಾರಂಭಗಳಿಗೆ ಜನರು ಸಹ ಬರಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಅಭ್ಯರ್ಥಿಗಳು ಪ್ರಚಾರ ಸಭೆಗಳನ್ನು ಬೆಳಗ್ಗೆ, ಸಂಜೆ, ರಾತ್ರಿ ವೇಳೆ ಹೆಚ್ಚು ಪ್ರಚಾರ ಸಭೆ ನಡೆಸುತ್ತಿದ್ದಾರೆ. ಪ್ರಚಾರ ಸಭೆಗಳು ಹೆಚ್ಚಾಗಿ ಮದುವೆ ಮಂಟಪಗಳಲ್ಲಿ, ಹಾಲ್‌ಗಳಲ್ಲಿ ನಡೆಸಲು ಯೋಜನೆ ರೂಪಿಸಿದ್ದಾರೆ.

ದಾಖಲೆ ಪ್ರಮಾಣದಲ್ಲಿ ಬಿಸಿಲ ಪ್ರಖರತೆ ಹೆಚ್ಚಾಗುತ್ತಿರುವ ಕಾರಣ ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರ ಜೊತೆಗೆ ಪಕ್ಷದ ಅಭ್ಯರ್ಥಿಗಳು ಹಾಗೂ ಅವರ ಪರ ಪ್ರಚಾರ ಮಾಡಲು ಆಯಾ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಭಾಗವಹಿಸೋದು ಸಾಮಾನ್ಯವಾಗಿದೆ. ಆದರೆ, ಬೇಸಿಗೆಯ ಬಿಸಿಲ ಬೇಗೆ ಹೆಚ್ಚಾಗಿರುವ ಹೊತ್ತಲ್ಲಿ ವಯಸ್ಸಾದ ಹಿರಿಯ ನಾಯಕರು ಭಾಗಿಯಾಗೋದು ಕಷ್ಟ ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿದೆ.

ಛತ್ರಿ, ನೀರಿನ ಬಾಟಲ್‌ಗೆ ಬೇಡಿಕೆ:

ಬಿಸಿಲಿ ಪ್ರಖರತೆಯಿಂದ ರಕ್ಷಿಸಿಕೊಳ್ಳಲು ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡವರು ಇದೀಗ ನೀರಿನ ಬಾಟಲಿ, ತಲೆಗೆ ಹಾಕುವ ಕ್ಯಾಪ್ ಹಾಗೂ ಛತ್ರಿಗಳ ಭರಾಟೆಗಳಿಗೆ ಹೆಚ್ಚು ದಾಸರಾಗಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬರ, ಬಿಸಿಲ ಪ್ರಖರತೆ ಹೆಚ್ಚಾಗಿರುವ ಕಾರಣ ಎಲ್ಲದಕ್ಕೂ ಹೊಡೆತ ಬಿದ್ದಿದೆ. ಜನರು ನೆಮ್ಮದಿಯಿಂದ ಜೀವನ ಮಾಡಲು ಸಹಿತ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.

---

ಕೋಟ್‌

ಲೋಕಸಭೆ ಚುನಾವಣೆಯ ಪ್ರಚಾರವನ್ನು ಈಗಾಗಲೇ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಸಭೆಗಳನ್ನು ನಡೆಸುವ ಮೂಲಕ ಆರಂಭಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ನಾವೆಲ್ಲರೂ ಹುಮ್ಮಸ್ಸಿನಿಂದ ಭಾಗವಹಿಸುತ್ತಿದ್ದೇವೆ. ಇನ್ನೂ ಬಹಿರಂಗ ಪ್ರಚಾರ ಕಾರ್ಯ ಆರಂಭವಾಗಿಲ್ಲ. ಬಿರುಬಿಸಿಲನಿಂದಾಗಿ ಅಷ್ಟಾಗಿ ಜನರು ಈಗ ಹೊರಗೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಬಹಿರಂಗ ಸಭೆಗೆ ಜನರು ಬರುವ ನಿರೀಕ್ಷೆಯಿದೆ.

-ಜಟ್ಟಿಂಗರಾಯ ಮಾಲಗಾರ, ಕಾಂಗ್ರೆಸ್ ಮುಖಂಡ

Share this article