ರೈತ ನೆಮ್ಮದಿಯಾಗಿ ಬದುಕುವ ವಾತಾವರಣ ನಿರ್ಮಿಸಬೇಕಿದೆ

KannadaprabhaNewsNetwork |  
Published : Apr 23, 2024, 12:51 AM IST
ಬೀಳಗಿ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿದರು. ಜೆ.ಟಿ. ಪಾಟೀಲ, ಎಂ.ಬಿ. ಸೌದಾಗಾರ್, ಬಸವಪ್ರಭು ಸರನಾಡಗೌಡ ಮತ್ತಿತರರು ಇದ್ದರು. | Kannada Prabha

ಸಾರಾಂಶ

ದಣಿವರಿಯದೆ ನಿಮ್ಮ ಕೆಲಸ ಮಾಡುತ್ತೇನೆ. ನನಗೊಂದು ಅವಕಾಶ ಕೊಡಿ ಎಂದು ವಿನಂತಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಕ್ಕಾ ಬಸ್‌ನ್ಯಾಗ್‌ ಫ್ರೀ ಓಡಾಡ್ಲಿಕ್ ಹತ್ತೀರಿ, ಅವ್ವಾ ನಿಮ್ ಬ್ಯಾಂಕ್ ಅಕೌಂಟ್‌ಗೆ ತಿಂಗ್ಳಾ ತಿಂಗ್ಳಾ ₹2000 ಜಮಾ ಆಗ್ತದಾ ಎಂದು ಪ್ರಚಾರಕ್ಕೆ ಹೋದ ಕಡೆ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲರು ಪ್ರಶ್ನೆ ಮಾಡುತ್ತ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮನವರಿಕೆ ಮಾಡುತ್ತಿದ್ದಾರೆ. ಇಂಥ ಇನ್ನೂ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದಾರೆ.

ಭಾನುವಾರ ಬೀಳಗಿ ವಿಧಾನಸಭಾ ಕ್ಷೇತ್ರದ ಫಕೀರಬೂದಿಹಾಳ, ಕೈನಕಟ್ಟಿ ಸೇರಿದಂತೆ ಹಲವೆಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ದಣಿವರಿಯದೆ ನಿಮ್ಮ ಕೆಲಸ ಮಾಡುತ್ತೇನೆ. ನನಗೊಂದು ಅವಕಾಶ ಕೊಡಿ ಎಂದು ವಿನಂತಿಸಿದರು. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ರೈತರ ಬದುಕು ಹಸನಾಗಿಲ್ಲ. ಆದಾಯ ಇದ್ದಷ್ಟೇ ಇದೆ. ಆದರೆ, ವೆಚ್ಚ ಹೆಚ್ಚಾಗುತ್ತಿದೆ. ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂಬ ಬೇಡಿಕೆ ಇದುವರೆಗೆ ಈಡೇರಿಲ್ಲ. ಬೆಂಬಲ ಬೆಲೆ ನಿಗದಿ ಬೇಡಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅನ್ನದಾತನ ಬದುಕು ಅತಂತ್ರವಾಗಿದೆ. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ ನೆಮ್ಮದಿಯ ಬದುಕು ಸಾಗಿಸುವ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದರು.

ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸುವ ಹುನ್ನಾರ ಬಿಜೆಪಿಯಿಂದ ನಡೆದಿದೆ. ಮತದಾರರು ಇದಕ್ಕೆ ಅವಕಾಶ ಕೊಡಬಾರದು. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ತಂದರೆ ಮತ್ತಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ₹25 ಲಕ್ಷ ಆರೋಗ್ಯ ವಿಮೆ ಯೋಜನೆ, ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ ₹1 ಲಕ್ಷ ಜಮಾ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಂತೆ ಕೇಂದ್ರವೂ ಕೂಡ ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.

ಬೀಳಗಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಕನಸು ನನ್ನದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಕೈ ಹಿಡಿದಿದ್ದರೆ ಈ ವೇಳೆಗೆ ನೀರಾವರಿಯ ಕನಸು ಪೂರ್ಣವಾಗುತ್ತಿತ್ತು. ಆದರೆ ನೀವು ನನ್ನ ಕೈ ಹಿಡಿಯಲಿಲ್ಲ ಎಂದರು. ಜಿಪಂ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗಾರ್ ಮಾತನಾಡಿ ದೀನ-ದಲಿತರು, ಅಲ್ಪಸಂಖ್ಯಾತರು ಹಾಗು ರೈತರ ಪರ ಇರುವ ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡ ಬಸವಪ್ರಭು ಸರನಾಡಗೌಡ, ಎಸ್.ಆರ್‌. ಮೇಟಿ, ಕಸ್ತೂರಿಬಾಯಿ ನಾಡಗೌಡ, ರಮೇಶ ಯಡಹಳ್ಳಿ, ಬಸವರಾಜ ಸಂಶಿ, ಹನುಮಂತಗೌಡ ಮತ್ತಿತರರು ಇದ್ದರು.

ಕೋಟ್..

ಕರ್ನಾಟಕ ರಾಜ್ಯ ಸತತ ಎರಡು ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅಂಥ ರೈತರಿಗೆ ನೆರವಾಗಲು ₹18 ಸಾವಿರ ಕೋಟಿ ನೆರವು ನೀಡಿ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕೇಂದ್ರಕ್ಕೆ ಮನವಿ ಮಾಡಿದರು. ಆದರೆ, ಅವರು ರಾಜ್ಯಕ್ಕೆ ಕೊಟ್ಟಿದ್ದು ಚೊಂಬು. ಕೇಂದ್ರ ಸರ್ಕಾರ ನಮಗೆ ಭಿಕ್ಷೆ ಕೊಡಬೇಕಾಗಿಲ್ಲ. ರಾಜ್ಯದ ಪಾಲಿಗೆ ಬರಬೇಕಾಗಿದ್ದ ಅನುದಾನವನ್ನು ಕೇಳಿದರೆ ಸ್ಪಂದಿಸಲಿಲ್ಲ.ಸಂಯುಕ್ತಾ ಪಾಟೀಲ. ಕಾಂಗ್ರೆಸ್‌ ಅಭ್ಯರ್ಥಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!