ಹಳಿಯಾಳ: ಲೋಕಸಭಾ ಚುನಾವಣೆ ಮುಗಿಯಿತು. ಇನ್ನಾದ್ರೂ ಕೆಲಸ ಮಾಡ್ರಿ. ಅಭಿವೃದ್ಧಿ ಕಾಮಗಾರಿಯನ್ನು ಸಮರೋಪಾದಿಯಲ್ಲಿ ನಡೆಸಿ. ಅದಕ್ಕಾಗಿ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಸೇವೆ ಸಲ್ಲಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಶುಕ್ರವಾರ ಸಂಜೆ ಹಳಿಯಾಳ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಕುಡಿಯುವ ನೀರಿನ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಭಿವೃದ್ದಿ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮಂಜೂರು ಮಾಡಲಾದ ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಯೋಜನೆಗಳು ಕಾಮಗಾರಿಗಳೂ ಸಾಕಷ್ಟು ವಿಳಂಬವಾಗಿದೆ. ಅಭಿವೃದ್ಧಿ ಕಾಮಗಾರಿಗಳು ಇಷ್ಟೊಂದು ವಿಳಂಬವಾದರೆ ಹೇಗೆ ಎಂದು ದೇಶಪಾಂಡೆ ಪ್ರಶ್ನಿಸಿದರು.
ನಾನು ಮತದಾರರಿಗೆ, ನನ್ನ ಕ್ಷೇತ್ರದ ಜನರಿಗೆ ಉತ್ತರಿಸಿ ಸಾಕಾಗಿದೆ. ನಿಮ್ಮನ್ನು ನಂಬಿಕೊಂಡು ನೀವು ಹೇಳಿದ ಕಾರಣವನ್ನೇ ಜನರಿಗೆ ತಿಳಿಸಿದ್ದೇನೆ. ಜನರಿಗೂ ತಾಳ್ಮೆ ಇರುತ್ತದೆ. ಹೀಗೆ ನೀವು ತಾಳ್ಮೆಯನ್ನು ಕೆಣಕುವ ಕಾರ್ಯ ಮಾಡಬಾರದು ಎಂದರು.ನನ್ನ ಗಮನಕ್ಕೆ ತನ್ನಿ:
ಕ್ಷೇತ್ರದಲ್ಲಿ ಕೈಗೊಂಡಿರುವ ದೊಡ್ಡ ಯೋಜನೆಗಳಿಗೆ ಯಾವುದೇ ಆಡಳಿತಾತ್ಮಕ ಅಡೆತಡೆಯಾದರೆ ಅಥವಾ ಯಾವುದಾದರೂ ಪರವಾನಗಿ ಬೇಕಾದಲ್ಲಿ ನನ್ನ ಗಮನಕ್ಕೆ ತನ್ನಿ. ನಾನು ಮಾಡಿಸಿ ಕೊಡುತ್ತೇನೆ. ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಹಂತವನ್ನು ನನ್ನ ಗಮನಕ್ಕೆ ತರಬೇಕು ಎಂದರು.ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸವನ್ನು ಮಾಡಿಸಿಕೊಳ್ಳಿ. ಅವರಿಗೆ ಕಾಮಗಾರಿ ಮುಗಿಸಲು ಅವಧಿ ನಿಗದಿಪಡಿಸಿ ಎಂದರು.
ಅಮೃತ ಯೋಜನೆ: ಪಟ್ಟಣದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಮೇಲ್ದರ್ಜೆಗೇರಿಸಲು ಅಮೃತ ಯೋಜನೆಯಲ್ಲಿ ₹59.31 ಕೋಟಿ ಹಾಗೂ ದಾಂಡೇಲಿ ನಗರಕ್ಕೆ ₹60.90 ಕೋಟಿ ಮಂಜೂರಾಗಿದೆ. ಈಗಾಗಲೇ ಈ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದು ಏಜೆನ್ಸಿ ನಿಗದಿ ಮಾಡಲಾಗಿದೆ. ಈ ಯೋಜನೆಯ ನಕಾಶೆಯನ್ನು ಸಿದ್ಧಪಡಿಸಿ ಅಧಿಕೃತ ಅನುಮತಿಗಾಗಿ ಕಳಿಸಲಾಗಿದೆ. ಹಳಿಯಾಳ ಮತ್ತು ದಾಂಡೇಲಿಯಲ್ಲಿ ಒಳಚರಂಡಿ ಯೋಜನೆಗಳು ಮುಕ್ತಾಯದ ಹಂತದಲ್ಲಿವೆ ಎಂದು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಕಾಳಿನದಿ ನೀರಾವರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ದೇಶಪಾಂಡೆಯವರು ಪರಿಶೀಲನೆ ನಡೆಸಿದರು.
ತಾಪಂ ಇಒ ಪರಶುರಾಮ ಘಸ್ತೆ, ಗ್ರೇಡ್- 2 ತಹಸೀಲ್ದಾರ್ ಜಿ.ಕೆ. ರತ್ನಾಕರ, ಹಳಿಯಾಳ ಪಿಡಬ್ಲ್ಯುಡಿ ಎಇಇ ಸುಧಾಕರ ಕಟ್ಟಿಮನಿ, ಜಿಪಂ ಎಇ ಸತೀಶ್, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಸೇರಿದಂತೆ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಅಧಿಕಾರಿಗಳು ಸಭೆಯಲ್ಲಿದ್ದರು.