ಕನ್ನಡಪ್ರಭ ವಾರ್ತೆ ಚಿಂಚೋಳಿ
ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಆನಂದ ನಾಗಪ್ಪ ಟೈಗರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಲ್ತಾನಬಿ ಖಲೀಲ ಪಟೇಲ ಇಬ್ಬರು ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಈ ಇಬ್ಬರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಫಲಿತಾಂಶ ಪ್ರಕಟಿಸಿದರು. ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಚುನಾವಣಾ ಸಿಬ್ಬಂದಿ ಶೋಯಾಬ ಪಟೇಲ ಭಾಗವಹಿಸಿದ್ದರು.
ಪುರಸಭೆ ಒಟ್ಟು೨೩ ಸದಸ್ಯರನ್ನು ಶಾಸಕರು, ಸಂಸದರನ್ನು ಒಳಗೊಂಡು ಒಟ್ಟು ೨೫ ಸದಸ್ಯರ ಪೈಕಿ ಕೇವಲ ೧೮ ಸದಸ್ಯರು, ಬೀದರ ಸಂಸದ ಸಾಗರ ಖಂಡ್ರೆ ಚುನಾವಣೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್, ಜದೇವಿ ಗಡಂತಿ, ಸುಶೀಲಬಾಯಿ ಹುಸೇಬಾಯಿ, ಭೀಮರಾವ ರಾಠೋಡ, ಶಿವಕುಮಾರ ಪೋಚಾಲಿ ಚುನಾವಣೆಯಲ್ಲಿ ಭಾಗವಹಿಸದೇ ಗೈರಾಗಿದ್ದರು.ಇದರಿಂದಾಗಿ ಕಾಂಗ್ರೆಸ್ ಪಕ್ಷದ ಸದಸ್ಯ ಜಗನ್ನಾಥ ಗುತ್ತೆದಾರ ನಾಮಪತ್ರ ಸಲ್ಲಿಸಲು ಪುರಸಭೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸಮಯ ಮುಗಿದಿದೆ ಎಂದು ಬಾಗಿಲಿನಲ್ಲಿಯೇ ಅಧಿಕಾರಿಗಳು, ಪೊಲೀಸರು ತಡೆಯೊಡ್ಡಿದ್ದರಿಂದ ಕೆಲಕಾಲ ಗದ್ದಲ ಉಂಟಾಗಿತ್ತು.
ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದರಿಂದ ಪಟ್ಟಣದಲ್ಲಿ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿಕೊಂಡು ಭಾರಿ ಸಂಭ್ರಮಿಸಿದರು.