ಪುರಸಭೆ ಅಧ್ಯಕ್ಷರ ಆಯ್ಕೆ ಅಸಿಂಧು: ನ್ಯಾಯಾಲಯ ತೀರ್ಪು

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ಗುಳೇದಗುಡ್ಡ ಪುರಸಭೆಯ ಅಧ್ಯಕ್ಷರ ಆಯ್ಕೆ ಅಸಿಂಧುವಾಗಿದೆ ಎಂದು ಘೋಷಿಸಿ, ಪುನಃ ಚುನಾವಣೆ ನಡೆಸಲು ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಲ್ಲಿನ ಪುರಸಭೆಯ ಅಧ್ಯಕ್ಷರ ಆಯ್ಕೆ ಅಸಿಂಧುವಾಗಿದೆ ಎಂದು ಘೋಷಿಸಿ, ಪುನಃ ಚುನಾವಣೆ ನಡೆಸಲು ಜಿಲ್ಲಾ ನ್ಯಾಯಾಲಯ ಗುರುವಾರ ತೀರ್ಪು ನೀಡಿ ಆದೇಶಿಸಿದೆ.

ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2024 ಆ.30ರಂದು ಚುನಾವಣೆ ನಡೆದಿತ್ತು. ಪುರಸಭೆ ಸದಸ್ಯರಾದ ಜ್ಯೋತಿ ಆಲೂರ (2 ನಾಮಪತ್ರ) ವಂದನಾ ಭಟ್ಟಡ (2) ಹಾಗೂ ಜೆಡಿಎಸ್‌ನಿಂದ ಜ್ಯೋತಿ ಗೋವಿನಕೊಪ್ಪ (1) ಹೀಗೆ ಒಟ್ಟು 05 ನಾಮಪತ್ರಗಳು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿದ್ದವು. ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಜ್ಯೋತಿ ಆಲೂರ ಹಾಗೂ ವಂದನಾ ಭಟ್ಟಡ ನಾಮಪತ್ರಗಳು ತಿರಸ್ಕೃತವಾಗಿದ್ದವು. ಹೀಗಾಗಿ ಜ್ಯೋತಿ ಗೋವಿನಕೊಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇದನ್ನು ಪ್ರಶ್ನಿಸಿ ಜ್ಯೋತಿ ಆಲೂರ ತಮಗೆ ಅನ್ಯಾಯವಾಗಿದೆ ಎಂದು ಅಸಮಾಧಾನಗೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜ್ಯೋತಿ ಗೋವಿನಕೊಪ್ಪ ಹಾಗೂ ಚುನಾವಣಾ ಅಧಿಕಾರಿಗಳಾದ ತಹಸೀಲ್ದಾರ್‌ ವಿರುದ್ಧ ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯ ಎರಡೂ ಕಡೆಯ ವಾದ ಆಲಿಸಿ ಸುರ್ದೀರ್ಘವಾದ 13 ಪುಟಗಳ ತೀರ್ಪು ನೀಡಿ, ಜ್ಯೋತಿ ಗೋವಿನಕೊಪ್ಪ ಆಯ್ಕೆಯನ್ನೂ ಅಸಿಂಧು ಎಂದು ಘೋಷಿಸಿ ಪುನಃ ಚುನಾವಣೆ ನಡೆಸಲು ಆದೇಶ ಹೊರಡಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಗೋವಿನಕೊಪ್ಪ ಆಯ್ಕೆ ಅನೂರ್ಜಿತಗೊಳಿಸಲಾಗಿದೆ. ಈ ಆದೇಶವನ್ನು ಕರ್ನಾಟಕ ಪುರಸಭೆ ಚುನಾವಣಾ ನಿಯಮಗಳ ಅಡಿ ಪಾಲಿಸಬೇಕೆಂದು ಚುನಾವಣಾ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿ, ಪುನಃ ಚುನಾವಣೆ ನಡೆಸಲು ಆದೇಶಿಸಿದೆ. ಸದ್ಯ ಅಧ್ಯಕ್ಷರ ಅಧಿಕಾರಾವಧಿ ಉಳಿದಿರುವುದೇ ನವೆಂಬರ್ 2025 ರವರೆಗೆ ಮಾತ್ರ. ಅಂದರೆ ಕೇವಲ 8 ತಿಂಗಳು.

ಏನಿದು ಘಟನೆ?:

ಪಟ್ಟಣ ಪುರಸಭೆ ಹೊಂದಿರುವ ಒಟ್ಟು 23 ಜನ ಸದಸ್ಯ ಬಲದಲ್ಲಿ 16 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕಾದ ಅಧ್ಯಕ್ಷ ಸ್ಥಾನ ಸಿಗದೇ, ಅವರ ಶೀತಲ ಸಮರದ ನಡುವೆ, ಕೇವಲ 5 ಜನ ಸದಸ್ಯರನ್ನು ಹೊಂದಿದ್ದ ಜೆಡಿಎಸ್ ಪಕ್ಷದ ಜ್ಯೋತಿ ಗೋವಿನಕೊಪ್ಪಗೆ ಅದೃಷ್ಟ ಒಲಿದು ಬಂದು, ಅಶ್ಚರ್ಯಕರ ರೀತಿಯಲ್ಲಿ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಪಡೆದುಕೊಂಡ ಅಪರೂಪದ ಘಟನೆ ಜರುಗಿತ್ತು. ನಾಮಪತ್ರ ತಿರಸ್ಕೃತಕ್ಕೆ ಕಾರಣ:

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜ್ಯೋತಿ ಆಲೂರ (2) ವಂದನಾ ಭಟ್ಟಡ (2) ಹಾಗೂ ಜೆಡಿಎಸ್‌ನಿಂದ ಜ್ಯೋತಿ ಗೋವಿನಕೊಪ್ಪ (1) ಹೀಗೆ ಒಟ್ಟು 5 ನಾಮಪತ್ರಗಳು ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆಯಾಗಿದ್ದವು.

ನಾಮಪತ್ರಗಳಲ್ಲಿ ಯಾವ ಸ್ಥಾನಕ್ಕೆ ಸ್ಪರ್ಧೆ ಎಂಬುವುದನ್ನು ಜ್ಯೋತಿ ಆಲೂರ ಹಾಗೂ ವಂದನಾ ಭಟ್ಟಡ ತಮ್ಮ ನಾಮಪತ್ರಗಳಲ್ಲಿ ನಮೂದಿಸಿರಲಿಲ್ಲ. ಹೀಗಾಗಿ ಇವರ ನಾಮಪತ್ರಗಳು ಚುನಾವಣಾ ಅಧಿಕಾರಿಗಳಿಂದ ತಿರಸ್ಕೃತಗೊಂಡಿದ್ದವು. ಇನ್ನು ಜ್ಯೋತಿ ಗೋವಿನಕೊಪ್ಪ ಇವರ ನಾಮಪತ್ರ ಕ್ರಮಬದ್ಧವಾಗಿದ್ದರಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಸೀಲ್ದಾರ್‌ ಮಂಗಳಾ ಎಂ. ಘೋಷಣೆ ಮಾಡಿದ್ದರು.

ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ ಮೊರೆ ಹೋಗುತ್ತೇವೆ. ನಮಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ.

ಜ್ಯೋತಿ ಗೋವಿನಕೊಪ್ಪ ಅಧ್ಯಕ್ಷರು, ಪುರಸಭೆ ಗುಳೇದಗುಡ್ಡ

Share this article