----ಕನ್ನಡಪ್ರಭ ವಾರ್ತೆ ಮೈಸೂರು
ಎಸ್‌ಎಸ್‌ಎಲ್ಸಿ ಪರೀಕ್ಷೆಯು ಶುಕ್ರವಾರದಿಂದ ಆರಂಭಗೊಂಡಿದ್ದು, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ 133 ಪರೀಕ್ಷಾ ಕೇಂದ್ರಗಳಲ್ಲೂ ಮೊದಲ ದಿನದ ಪರೀಕ್ಷೆಯು ಸುಗಮವಾಗಿ ನಡೆಯಿತು.ಜಿಲ್ಲೆಯಲ್ಲಿ 19989 ಬಾಲಕರು, 19114 ಬಾಲಕಿಯರು ಸೇರಿದಂತೆ ಒಟ್ಟು 39103 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಮೊದಲ ದಿನದ ಪರೀಕ್ಷೆಯಲ್ಲಿ 35968 ಹಾಜರಾಗಿದ್ದು, 420 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದರಲ್ಲಿ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 43, ಹುಣಸೂರಿನಲ್ಲಿ 51, ಕೆ.ಆರ್. ನಗರದಲ್ಲಿ 28, ಮೈಸೂರು ಉತ್ತರದಲ್ಲಿ 122, ಮೈಸೂರು ದಕ್ಷಿಣದಲ್ಲಿ 40, ಮೈಸೂರು ಗ್ರಾಮಾಂತರದಲ್ಲಿ 31, ನಂಜನಗೂಡಿನಲ್ಲಿ 45, ಪಿರಿಯಾಪಟ್ಟಣದಲ್ಲಿ 35 ಮತ್ತು ಟಿ. ನರಸೀಪುರದಲ್ಲಿ 25 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪ್ರಥಮ ಭಾಷೆಯಾದ ಕನ್ನಡ, ತೆಲುಗು, ಮರಾಠಿ, ತಮಿಳು, ಉರ್ದು ಪರೀಕ್ಷೆ ಮೊದಲ ದಿನ ನಡೆದಿವೆ. ನಗರ ಮತ್ತು ಜಿಲ್ಲೆಯ 133 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳು ಧಾವಿಸಿದರು. ಕೆಲವರು ಕುಳಿತಲ್ಲಿ ಓದಿದ್ದನ್ನು ಮನವರಿಕೆ ಮಾಡಿಕೊಂಡರೆ, ಮತ್ತೆ ಕೆಲವರು ತಮ್ಮ ಹಾಲ್ ಟಿಕೆಟ್ ಹಿಡಿದು ಕೊಠಡಿ ಸಂಖ್ಯೆ ಮತ್ತು ಕೂರುವ ಜಾಗವನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು.ಪರೀಕ್ಷಾ ಅಕ್ರಮ ತಡೆಯಲು ವೆಬ್ ಕಾಸ್ಟಿಂಗ್ ಸಿಸ್ಟೆಮ್ ಹಾಗೂ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರು ವೆಬ್ ಕಾಸ್ಟಿಂಗ್ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಪರೀಕ್ಷೆಯ ಪ್ರವೇಶ ಪತ್ರಕ್ಕೆ ಸಂಬಂಧಪಟ್ಟಂತೆ ಎಲ್ಲಿಯೂ ಯಾವುದೇ ರೀತಿಯ ಗೊಂದಲಗಳು ಆಗಿಲ್ಲ. ಎಲ್ಲಿಯೂ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡುವ ಮತ್ತು ಡಿಬಾರ್ ಪ್ರಕರಣಗಳು ನಡೆದಿಲ್ಲ. ಎಲ್ಲಾ ಕೇಂದ್ರಗಳಲ್ಲೂ ಕಟ್ಟುನಿಟ್ಟಾಗಿ ಪರೀಕ್ಷೆ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಜವರೇಗೌಡ ತಿಳಿಸಿದ್ದಾರೆ.