ಚುನಾವಣೆಯ ನೆಪದಲ್ಲಿ ಮಕ್ಕಳನ್ನು ಮರೆತ ಸರ್ಕಾರ..!

KannadaprabhaNewsNetwork |  
Published : May 04, 2024, 12:37 AM ISTUpdated : May 04, 2024, 12:38 AM IST
11 | Kannada Prabha

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ‌ ಇಲಾಖೆಯ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿರುವ ಬಾಲಭವನ ಸಮಿತಿಗಳ ಮೂಲಕ ಪ್ರತೀ ವರ್ಷ ಒಂದು ವಾರದ ಶಿಬಿರಗಳು ಆಯೋಜನೆಯಾಗುತ್ತಿತ್ತು.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಜನಪ್ರತಿನಿಧಿಗಳು, ಅಧಿಕಾರಿಗಳು ಚುನಾವಣೆಯ ಗುಂಗಿನಲ್ಲಿ ಮುಳುಗಿದ್ದು, ಸರ್ಕಾರ ಮಕ್ಕಳನ್ನು ಮರೆತುಬಿಟ್ಟಿದೆ. ಬೇಸಿಗೆಯ ರಜಾ ದಿನಗಳನ್ನು ಬೇಸಿಗೆ ಶಿಬಿರಗಳ ಮೂಲಕ ಹೊಸತನವನ್ನು ಕಲಿಯಲು ಪ್ರತೀ ವರ್ಷವೂ ಸರ್ಕಾರವೇ ಸಂಬಂದಿಸಿದ ಇಲಾಖೆಗಳ ಮೂಲಕ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿತ್ತು. ಆದರೆ ಈ ವರ್ಷ ಚುನಾವಣೆಯ ಒತ್ತಡದಲ್ಲಿರುವ ಅಧಿಕಾರಿಗಳೂ ಮಕ್ಕಳ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡಿಲ್ಲ. ಹೀಗಾಗಿ ರಾಜ್ಯದ ಲಕ್ಷಾಂತರ ಮಕ್ಕಳು ಬೇಸಿಗೆ ಶಿಬಿರಗಳಿಂದ ವಂಚಿತರಾಗಬೇಕಾಗಿದೆ.

ಈ ಬಾರಿ ಬಾಲಭವನದ ಶಿಬಿರವೂ ಇಲ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ‌ ಇಲಾಖೆಯ ಆಶ್ರಯದಲ್ಲಿ ತಾಲೂಕು ಮಟ್ಟದಲ್ಲಿರುವ ಬಾಲಭವನ ಸಮಿತಿಗಳ ಮೂಲಕ ಪ್ರತೀ ವರ್ಷ ಒಂದು ವಾರದ ಶಿಬಿರಗಳು ಆಯೋಜನೆಯಾಗುತ್ತಿತ್ತು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾಮಕ್ಕಳಿಗೆ ಹೆಚ್ಚು ಒತ್ತು ನೀಡುವ ಈ ಶಿಬಿರದಲ್ಲಿ ಮಕ್ಕಳು ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸುತ್ತಿದ್ದರು. ಆದರೆ ಈ ಬಾರಿ ಸಂಬಂಧಪಟ್ಟ ಅಧಿಕಾರಿಗಳು ಚುನಾವಣಾ ಒತ್ತಡದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ರಾಜ್ಯ ಬಾಲಭವನ‌ ಸೊಸೈಟಿ ಶಿಬಿರದ ಬಗ್ಗೆ ಯೋಜನೆಯನ್ನೇ ರೂಪಿಸಿದಂತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳು ಬೇಸಿಗೆ ಶಿಬಿರಗಳಿಂದ ವಂಚಿತರಾಗಿದ್ದಾರೆ.ಮೊಬೈಲ್- ಟಿವಿಗೆ ಶರಣಾದ ಮಕ್ಕಳು: ನಗರ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳು ಭಾರೀ ಶುಲ್ಕ ನಿಗದಿ ಮಾಡಿ ಬೇಸಿಗೆ ಶಿಬಿರಗಳನ್ನು ನಡೆಸುತ್ತಾರೆ. ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳು ಉಚಿತವಾಗಿ ಶಿಬಿರಗಳನ್ನು ಆಯೋಜಿಸುತ್ತಿವೆ. ಆದರೂ ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳು ಶಿಬಿರಗಳಿಂದ‌ ವಂಚಿತರಾಗಿ ಮನೆಗಳಲ್ಲಿಯೇ ಕಾಲಕಳೆಯುತ್ತಿದ್ದಾರೆ. ಮೊಬೈಲ್ ಹಾಗೂ ಟಿವಿಗೆ ಶರಣಾಗಿರುವ ಮಕ್ಕಳ‌ ಬಗ್ಗೆ ಹೆತ್ತವರೂ ಚಿಂತೆಗೀಡಾಗಿದ್ದು, ಸರ್ಕಾರಿ ಪ್ರಾಯೋಜಿತ ಶಿಬಿರಗಳಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಮಕ್ಕಳ ಬಗ್ಗೆ ಯೋಚಿಸಬೇಕಾದ ಸರ್ಕಾರ ಚುನಾವಣೆಯ ನೆಪನೀಡಿ ಬೇಸಿಗೆ ಶಿಬಿರಗಳಿಗೆ ಅನುದಾನ ನೀಡದಿರುವುದು ದುರಂತವೇ ಸರಿ.

ಇನ್ನೂ ಸಮಯಾವಕಾಶವಿದೆ: ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಕ್ರಿಯೆ ಮೇ 7 ರಂದು ಮುಕ್ತಾಯಗೊಳ್ಳಲಿದ್ದು, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳಿಗೆ ರಿಲ್ಯಾಕ್ಸ್ ದೊರೆಯಲಿದೆ. ಸರ್ಕಾರ ಮುಂದಿನ ದಿನಗಳಲ್ಲಾದರೂ ರಾಜ್ಯವ್ಯಾಪಿ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನು ನಡೆಸುವ ನಿಟ್ಟಿನಲ್ಲಿ‌ ದಿಟ್ಟ ಮನಸ್ಸು ಮಾಡಬೇಕಿದೆ.ಬೇಸಿಗೆ ಶಿಬಿರ ಆಯೋಜನೆಗೆ ಈ ಬಾರಿ ಯಾವುದೇ ಸುತ್ತೋಲೆ ಬಂದಿಲ್ಲ, ಪ್ರತೀ ವರ್ಷ ಬಾಲಭವನದಿಂದ ಶಿಬಿರಗಳು ನಡೆಯುತ್ತಿತ್ತು

- ಉಸ್ಮಾನ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ

---ಶಿಬಿರಗಳಿಂದ ಮಕ್ಕಳು ತುಂಬಾ ಕಲಿತುಕೊಳ್ಳುತ್ತಾರೆ, ಚುನಾವಣೆಯ ನೆಪವೊಡ್ಡಿ ಮಕ್ಕಳ ಬೇಸಿಗೆ ಶಿಬಿರಗಳಿಗೆ ಬ್ರೇಕ್ ಹಾಕುವುದು ಸರಿಯಲ್ಲ

- ಐಕೆ ಬೊಳುವಾರು, ಹಿರಿಯ ರಂಗಕರ್ಮಿ, ಪುತ್ತೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗನಾಥಸ್ವಾಮಿ ದೇಗುಲದಲ್ಲಿ ಸೌಕರ್ಯ ಕೊರತೆ
ಯುವಜನರನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ: ತೇಜಸ್ವಿ