ರಾಜಕಾರಣಗಳ ಭ್ರಷ್ಟಾಚಾರಕ್ಕೆ ಚು. ವ್ಯವಸ್ಥೆಯೂ ಕಾರಣ: ಸಿದ್ದರಾಮಯ್ಯ ಬೇಸರ

KannadaprabhaNewsNetwork |  
Published : Oct 02, 2026, 04:00 AM IST
ಫೋಟೋ- ಹಿಂದು 1 ಮತ್ತು 2 | Kannada Prabha

ಸಾರಾಂಶ

ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನು ಅನಿವಾರ್ಯವಾಗಿ ಭ್ರಷ್ಟರಾಗುವಂತಹ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

-ಇದು ರಾಜಕಾರಣಿಗಳು ಭ್ರಷ್ಟರಾಗುವಂಥ ಸ್ಥಿತಿಗೆ ತಳ್ತಿದೆ

-ಮಾಜಿ ಸಿಎಂ ಜೆ.ಎಚ್‌.ಪಟೇಲ್‌ ಸ್ಮರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂದಿನ ಚುನಾವಣಾ ವ್ಯವಸ್ಥೆ ರಾಜಕಾರಣಿಗಳನ್ನು ಅನಿವಾರ್ಯವಾಗಿ ಭ್ರಷ್ಟರಾಗುವಂತಹ ಪರಿಸ್ಥಿತಿಗೆ ತಳ್ಳುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಆಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ 96ನೇ ಜನ್ಮದಿನದ ಅಂಗವಾಗಿ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸವಪ್ಪ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಸುಧಾರಣೆ ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ವಿಚಾರವಲ್ಲ. ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬೇಕು ಎಂದರು.

ಸುಧಾರಣೆಗೆ ಹಲವು ಸಮಿತಿ:

ಚುನಾವಣಾ ವ್ಯವಸ್ಥೆ ಸುಧಾರಣೆಗೆ ಈ ಹಿಂದೆ ಹಲವು ಪ್ರಯತ್ನಗಳು ನಡೆದಿವೆ. ಈ ಸಂಬಂಧ ಹಲವು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳ ಶಿಫಾರಸುಗಳನ್ನು ಸಮಗ್ರವಾಗಿ ಜಾರಿಗೆ ತಂದಿದ್ದರೆ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರಬಹುದಾಗಿತ್ತು. ಆದರೆ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿಲ್ಲ ಎಂದು ಹೇಳಿದರು.

ಇಂದ್ರಜಿತ್ ಗುಪ್ತಾ ಸಮಿತಿ ಪ್ರಸ್ತಾಪಿಸಿದ್ದ ಮಾದರಿಯಲ್ಲಿ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತಿಸಬೇಕು. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ರಾಜಕೀಯ ಪಕ್ಷಗಳ ನೀತಿ, ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮಾಧ್ಯಮಗಳ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ರಾಜಕೀಯ ಪಕ್ಷಗಳೂ ಬದಲಾಗಬೇಕು:

ಚುನಾವಣೆಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಲು ಕೇವಲ ಕಾನೂನು ಅಥವಾ ಚುನಾವಣಾ ಆಯೋಗದ ಮಟ್ಟದಲ್ಲಿ ಬದಲಾವಣೆ ಮಾಡಿದರೆ ಸಾಲದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮತದಾರರ ಮನೋಭಾವದಲ್ಲಿಯೂ ಬದಲಾವಣೆ ಆಗಬೇಕು, ಪ್ರಜಾಸತ್ತಾತ್ಮಕ ಜಾಗೃತಿ ಮತ್ತು ವೈಚಾರಿಕತೆ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿ.ಜಿ.ಆರ್‌.ಸಿಂಧ್ಯಾ, ಎಂ.ಪಿ.ನಾಡಗೌಡ, ಬಿ.ಸೋಮಶೇಖರ್‌, ಶಾಸಕ ಗಣೇಶ್‌ ಪ್ರಸಾದ್‌, ಅದಮ್ಯಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌, ರೈತ ಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ, ಪಟೇಲರ ಪುತ್ರರಾದ ಮಹಿಮಾ ಪಟೇಲ್‌, ತ್ರಿಶೂಲ್‌ ಪಟೇಲ್‌ ಮತ್ತಿತರರು ಉಪಸ್ಥಿತರಿದ್ದರು.

-ಬಾಕ್ಸ್‌-

ಮೊದಲ ಚುನಾವಣೆಗೆ 63 ಸಾವಿರ ರು. ವೆಚ್ಚ

ಇದೇ ವೇಳೆ ತಮ್ಮ ಹಿಂದಿನ ಚುನಾವಣಾ ಅನುಭವವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ ಅವರು, 1983ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಜಾರ್ಜ್ ಫರ್ನಾಂಡಿಸ್ 10 ಸಾವಿರ ರು. ನೀಡಿದ್ದರು. ಹಳ್ಳಿಗಳಲ್ಲಿ ಜನರೇ 200, 500 ರು. ನೀಡುತ್ತಿದ್ದರು. ಸುಮಾರು 63 ಸಾವಿರ ರು.ಗಳಲ್ಲಿ ಆ ಚುನಾವಣೆ ಮುಗಿಸಲಾಗಿತ್ತು. 1980ರಲ್ಲಿ ಲೋಕದಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಚೌಧರಿ ಚರಣ್ ಸಿಂಗ್ ಒಂದು ಲಕ್ಷ ರು. ಕಳುಹಿಸಿದ್ದರು. ಆ ಹಣ ಮುಗಿದ ನಂತರ ಜನರಿಗೆ ಟೀ ಕೊಡಿಸಲೂ ಹಣವಿಲ್ಲದಂಥ ಸ್ಥಿತಿ ಇತ್ತು. ಆದರೆ, 2006ರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ಪರವಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ತಾವೂ ಹಣ ಖರ್ಚು ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು. ಅಲ್ಲಿಂದೀಚೆಗೆ ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ
ನೈಸ್‌ ಅಕ್ರಮ ವಿರುದ್ಧ ಇಂದಿನಿಂದ ಎಚ್‌ಡಿಕೆ ಹೋರಾಟದ ಅಖಾಡಕ್ಕೆ