ಕನ್ನಡಪ್ರಭ ವಾರ್ತೆ ಕಲಬುರಗಿ
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ಪ್ರತಿನಿಧಿ ಆಯ್ಕೆ ಮಾಡಲು ಜೂ.3ರಂದು ಮತದಾನ ನಡೆಯಲಿದೆ.ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಈ ವಿಶಾಲವಾದಂತಹ ಮತಕ್ಷೇತ್ರದಾದ್ಯಂತ ಹರಡಿರುವ 1,56,623 ಪದವಿಧರ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 36ಕ್ಕೂ ಹೆಚ್ಚಿನ ಮತದರಾರರು ಕಲಬುರಗಿ ಜಿಲ್ಲೆಯಂದರಲ್ಲಿಯೇ ನೋಂದಣಿಯಾಗಿರೋದು ವಿಶೇಷವಾಗಿದೆ.
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.ಕಲಬುರ್ಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ 160 ಮುಖ್ಯ ಮತ್ತು 35 ಹೆಚ್ಚುವರಿ ಸೇರಿ ಒಟ್ಟು 195 ಮತಗಟ್ಟೆಗಳಿದ್ದು, ಅಂತಿಮ ಸ್ಫರ್ಧಾ ಕಣದಲ್ಲಿ 19 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಕಣದಲ್ಲಿರುವವರು: ಈಶಾನ್ಯ ಪದವೀಧರ ಮತಕ್ಷೇತ್ರದ ಮೇಲ್ಮನೆ ಸ್ಪರ್ಧಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮರನಾಥ ನೀಲಕಂಠ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ ಬಸವರಾಜ, ಸ್ವತಂತ್ರ ಅಭ್ಯರ್ಥಿಗಳಾದ ಅನಿಮೇಶ ತಂದೆ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ತಂದೆ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ. ತಂದೆ ಸೋಮಪ್ಪ, ಎನ್.ಪ್ರತಾಪರೆಡ್ಡಿ ತಂದೆ ಎನ್.ಗೌರಣ್ಣ, ಬಸವರಾಜ ತಂದೆ ದುರ್ಗಪ್ಪ, ಮಹೆಬೂಬ್ ತಂದೆ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ, ಮೊಹಮ್ಮದ್ ಹುಸೇನ್ ತಂದೆ ಮೊಹಮ್ಮದ್ ಅಲಿ, ರಿಯಾಜ್ ಅಹ್ಮದ್ ತಂದೆ ನಬಿಸಾಬ್, ವಿಲಾಸ ತಂದೆ ಮಾರುತಿ, ಶರಣಬಸಪ್ಪ ತಂದೆ ಪೀರಪ್ಪ, ಶರಣಬಸಪ್ಪ ಎಸ್.ಎ. ತಂದೆ ಶ್ರೀಮಂತಪ್ಪ, ಶಶಿಧರ ತಂದೆ ಬಸವರಾಜ, ಶಿವಕುಮಾರ ತಂದೆ ಜಂಬುನಾಥ ಸ್ವಾಮಿ, ಸತೀಷಕುಮಾರ ತಂದೆ ಅಮೃತ, ಸಾಯಿನಾಥ ತಂದೆ ಸಂಜೀವಕುಮಾರ್ ನಾಗೇಶ್ವರ, ಸುನೀಲಕುಮಾರ ತಂದೆ ಹೈದ್ರಪ್ಪ, ಸುರೇಶ ತಂದೆ ದವಿದಪ್ಪ ಅವರು ಇದ್ದಾರೆ. ಮತದಾರರು ಜೂ 3 ರಂದು ನಡೆಯುವ ಮತದಾನದಲ್ಲಿ ಇವರ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.ಮತಪತ್ರ ಬಳಸಿ ಮತದಾನ: ಸಾಮಾನ್ಯವಾಗಿ ವಿಧಾನಸಭೆ, ಲೋಕಸಭೆ ಚುನಾವಣೆಗಳು ಇ.ವಿ.ಎಂ. ಮತಯಂತ್ರಗಳ ಮೂಲಕ ಮತ ಚಲಾಯಿಸಲಾಗುತ್ತಿದೆ. ಇಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗವು ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು. ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿದೆ. ಇನ್ನು ಈ ಚುನಾವಣೆಯಲ್ಲಿ ನೋಟಾ ಅನ್ವಯಿಸದ ಕಾರಣ ಮತಪತ್ರದಲ್ಲಿ ಇದನ್ನು ಮುದ್ರಿಸಿರುವುದಿಲ್ಲ. ಬ್ಯಾಲೆಟ್ ಪೇಪರ್‍ನಲ್ಲಿ ಆದ್ಯತೆ ಸೂಚಿಸಲು ಸರಿಯಾದ ರೀತಿಯ ಅಂಕಿ ಮೂದಿಸಬೇಕು.
ಬನ್ನಿ,ಮತ ಚಲಾಯಿಸಿ: ಜೂ.3ರಂದು ಬೆ.8 ಗಂಟೆಯಿಂದ ಮಧ್ಯಾಹ್ನ 4ರ ವರೆಗೆ ಮತದಾನ ಸಮಯ ನಿಗದಿ ಮಾಡಲಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕೆಂದು ಕೃಷ್ಣ ಭಾಜಪೇಯಿ ಅವರು ಮನವಿ ಮಾಡಿದ್ದಾರೆ.ಸಹಾಯವಾಣಿ ಸ್ಥಾಪನೆ: ಕ್ಷೇತ್ರದ 7 ಜಿಲ್ಲೆಗಳಲ್ಲಿ ಮತದಾರರಿಗೆ ಮತಗಟ್ಟೆ ವಿಳಾಸ, ಕ್ರಮ ಸಂಖ್ಯೆ, ಭಾಗ ಸಂಖ್ಯೆ ಮಾಹಿತಿ ಪಡೆಯಲು ಜಿಲ್ಲಾ ಕೇಂದ್ರಗಳಲ್ಲಿ ಟೋಲ್ ಫ್ರೀ ಸಂ.1950 ರಂತೆ ಸಹಾಯವಾಣಿ ಸ್ಥಾಪಿಸಲಾಗಿದೆ. ತಾಲೂಕು ಹಂತದಲ್ಲಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಸಹ ನೀಡಲಾಗಿದೆ. ಇದರ ಜೊತೆಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 08472-224461/ 224462/ 224463/ 224464 ಸಹಾಯವಾಣಿ ಸ್ಥಾಪಿಸಿದ್ದು, ಕಚೇರಿ ಅವಧಿಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.ಮತಗಟ್ಟೆ ಮಾಹಿತಿಗೆ ಸಂಪರ್ಕಿಸಿ
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆ-2024 ಹಿನ್ನೆಲೆಯಲ್ಲಿ ಇದೇ ಜೂ.3ರಂದು ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂಥ ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ಮತದಾರರು ಇದರ ಲಾಭ ಪಡೆಯಬೇಕೆಂದು ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ ಅಫಜಲ್ಪುರ 08470-282020, ಆಳಂದ 08477-202428, ಚಿಂಚೋಳಿ 08475-200127, ಚಿತ್ತಾಪೂರ-08474-236250, ಶಹಾಬಾದ್ 08474-200145, ಕಲಬುರಗಿ ನಗರಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ 08472-241364, ಕಲಬುರಗಿ ಗ್ರಾಮೀಣಕ್ಕೆ ಸಂಬಂಧಿಸಿದಂತೆ ಕಲಬುರಗಿ 08472-278636, ಕಮಲಾಪೂರ 08478-200144, ಜೇವರ್ಗಿ 08442-236025, ಯಡ್ರಾಮಿ-8310770063, ಸೇಡಂ 08441-276184 ಹಾಗೂ ಕಾಳಗಿ-7483334202.