-------
ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಗಳಿಗೆ ಅ. 28ರಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಚುನಾವಣಾ ಕಣ ರಂಗೇರಿದ್ದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಶುಕ್ರವಾರ 15 ಮಂದಿ ನಿರ್ದೇಶಕ ಸ್ಥಾನದ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
34 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈವರೆಗೆ ಒಟ್ಟು 55 ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದು, ಇದರಿಂದ ಚುನಾವಣಾ ಜ್ವರ ಕಾವೇರಿದ್ದು ಎಲ್ಲರ ಗಮನ ಸೆಳೆಯುತ್ತಿದೆ.ಅ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 21 ರಂದು ವಾಪಾಸಾತಿಗೆ ಕಾಲಾವಕಾಶ ನಿಗದಿ ಮಾಡಲಾಗಿದ್ದು, ಅಂದು ಸಂಜೆ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗುತ್ತದೆಯಲ್ಲದೆ, 28ರ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮತದಾನ ನಡೆಸಿ, ಆನಂತರ ಮತ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿರುವ ಬಿಆರ್.ಸಿ ವೆಂಕಟೇಶ್ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ 2,045 ಮಂದಿ ನೌಕರರು ಮತದಾನ ಮಾಡುವ ಹಕ್ಕು ಹೊಂದಿದ್ದು, ಈಗ ತಾಲೂಕಿನಾದ್ಯಂತ ಎಲ್ಲ ಕಡೆಯು ಚುನಾವಣೆಯ ವಿಚಾರ ಚರ್ಚೆಯಾಗುತ್ತಿದ್ದು, ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.ಅವಿರೋಧ ಆಯ್ಕೆ: 34 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ 10 ಸ್ಥಾನಗಳಿಗೆ ಆಯ್ಕೆ ಬಯಸಿ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಖಚಿತವಾಗಿದೆ.
ಆರೋಗ್ಯ ಇಲಾಖೆಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಇಲಾಖೆಯ ಕೆ.ವಿ. ರಮೇಶ್, ಎಸ್.ಎಂ. ಗಂಗಾಧರ್, ಕೆ.ಎಸ್. ಪಾರ್ವತಿ, ಎಂ. ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಿಡಿಪಿಒ ಸಿ.ಎಂ.ಅಣ್ಣಯ್ಯ, ಅಬಕಾರಿ ಇಲಾಖೆಯ ಕೆ.ಪಿ. ಶಿವಕುಮಾರ್, ಪಶುಪಾಲನಾ ಇಲಾಖೆಯ ಹೆಚ್.ಪಿ.ಹರೀಶ್, ಖಜಾನೆ ಇಲಾಖೆಯ ಎಚ್.ಕೆ. ಜಯಲಕ್ಷ್ಮಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಕೆ.ಎಂ. ಮುರುಳಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.