ರಾಮನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಒಳಗೊಂಡಿರುವ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿ(ಬಿಡಿಸಿಸಿ)ನ 21 ನಿರ್ದೇಶಕ ಸ್ಥಾನಗಳಿಗೆ ಡಿಸೆಂಬರ್ 7ರಂದು ಚುನಾವಣೆ ನಿಗದಿಯಾಗಿದೆ.
ಸಹಕಾರ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಸಲುವಾಗಿ ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಗಳು ರಾಜಕೀಯ ಚುನಾವಣೆ ಗಳನ್ನೇ ಮೀರಿಸುವಂತೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದು ಬೇರೆ ಬೇರೆ ಜಿಲ್ಲೆಗಳ ಡಿಸಿಸಿ ಚುನಾವಣೆಗಳಲ್ಲಿ ಸಾಬೀತಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣಗೊಂಡಿರುವ ರಾಮನಗರ ಜಿಲ್ಲೆಯಲ್ಲಿ 100 ಪಿಎಸಿಎಸ್‌ಗಳಿದ್ದು, ಈ ಪೈಕಿ ಕ್ಷೇತ್ರ ವಿಗಂಡಣೆಯ ಕಾರಣ ಕೆಲ ಪಿಎಸಿಎಸ್‌ಗಳ ಕಾರ್ಯಕ್ಷೇತ್ರ ಅದಲು ಬದಲಾಗಿದ್ದು, ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ತಲಾ ಒಬ್ಬರು ನಿರ್ದೇಶಕರು ಆಯ್ಕೆಯಾಗಬೇಕಿದ್ದು, ಈ ಹಿಂದೆ ಗೆದ್ದ ನಿರ್ದೇಶಕರುಗಳು ಹಾಗೂ ಕಳೆದ ಬಾರಿ ಸೋತ ಸ್ಪರ್ಧಿಗಳ ಜೊತೆಗೆ ಕೆಲ ಹೊಸ ಮುಖಗಳು ಸಹ ಈ ಬಾರಿಯ ಬಿಡಿಸಿಸಿ ಬ್ಯಾಂಕ್ ಅಖಾಡಕ್ಕೆ ಧುಮುಕಿದ್ದಾರೆ.ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು, ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಬಹುದಾದರೂ ಜೆಡಿಎಸ್ ಜೊತೆಗಿನ ಮೈತ್ರಿ ಕಾರಣ ಇಬ್ಬರು ಬಿಡಿಸಿಸಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ತಾಲೂಕುಗಳ ಜೊತೆ ಹೊಸದಾಗಿ ಹಾರೋಹಳ್ಳಿ ಕೂಡ ತಾಲೂಕಾಗಿ ರೂಪುಗೊಂಡಿದ್ದು, ಐದು ತಾಲೂಕುಗಳಿಂದ ಐವರು ನಿರ್ದೇಶಕರುಗಳು ಆಯ್ಕೆಯಾಗಬೇಕಿದೆ.
ಕೆಲ ಪಿಎಸಿಎಸ್ ಗಳ ಕಾರ್ಯಕ್ಷೇತ್ರ ಬದಲಾದ ಕಾರಣ ಚನ್ನಪಟ್ಟಣದ ಮೂರು ಪಿಎಸಿಎಸ್ ಗಳನ್ನು ರಾಮನಗರಕ್ಕೂ, ರಾಮನಗರದ ಮೂರನ್ನು ಮತ್ತೂಂದು ಕ್ಷೇತ್ರಕ್ಕೂ ಸೇರಿಸಿರುವ ಕಾರಣ ಕೆಲ ಗೊಂದಲ ಉಂಟಾಗಿದ್ದು, ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಕಳೆದ ಅವಧಿ ಹೊರತುಪಡಿಸಿ ಕನಕಪುರದಿಂದ ಅವಿರೋಧ ಆಯ್ಕೆಯಾಗುತ್ತಿದ್ದ ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದೀಗ ಆ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರ ಆಪ್ತ ಎಂ.ಡಿ.ವಿಜಯ್ ದೇವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಅತ್ತ ಮಾಗಡಿಯಲ್ಲಿ ಕಳೆದ ಮೂರು ಬಾರಿಯು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗುತ್ತಿರುವ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ಸಹೋದರ ಅಶೋಕ್ ಈ ಬಾರಿಯು ಅವಿರೋಧ ಆಯ್ಕೆಯಾಗುವ ಹವಣಿಕೆಯಲ್ಲಿದ್ದಾರೆ.
ಬಾಕ್ಸ್ ...
20ಕೆಆರ್ ಎಂಎನ್ 8.ಜೆಪಿಜಿ