ಮಂಜುನಾಥ ಕೆ.ಎಂ. ಬಳ್ಳಾರಿ
ಹಲವು ವರ್ಷಗಳಿಂದ ಚುನಾವಣೆ ನಡೆಯದೆ ಮಂಕಾಗಿದ್ದ ಗ್ರಾಮ ರಾಜಕಾರಣಕ್ಕೆ ಇದೀಗ ಹೊಸ ಚೈತನ್ಯ ಬಂದಿದೆ. ಚುನಾವಣೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಟಿಕೆಟ್ ಆಕಾಂಕ್ಷಿಗಳು ರಾಷ್ಟ್ರೀಯ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಹಳ್ಳಿಯ ಕಟ್ಟೆಗಳು ರಾಜಕೀಯ ಚರ್ಚಾ ಕೇಂದ್ರಗಳಾಗಿ ಬದಲಾಗಿವೆ. ಚುನಾವಣೆ ದಿನಾಂಕ ಮುಹೂರ್ತ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ಬಿರುಸು ಪಡೆದುಕೊಳ್ಳುವ ಸಾಧ್ಯತೆಯಿದೆ.
ಹಳ್ಳಿಗಳಲ್ಲಿ ರಾಜಕೀಯ ಚರ್ಚೆ: ಗ್ರಾಪಂ ಚುನಾವಣೆ ಹೊರತುಪಡಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ರಾಜಕೀಯ ವೇದಿಕೆಗಳಾಗಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಹಲವು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಪರಿಣಾಮ ಸ್ಥಳೀಯ ರಾಜಕೀಯ ಮುಖಂಡರು ಅಧಿಕಾರದ ಅವಕಾಶದಿಂದ ವಂಚಿತರಾಗಿದ್ದಾರೆ. ಇದೀಗ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಮುಖಂಡರು, ಪಕ್ಷಗಳ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ನಡುವೆ ಚುನಾವಣೆಯದ್ದೇ ಚರ್ಚೆ ನಡೆಯುತ್ತಿದೆ. ಜಿಪಂ ಹಾಗೂ ತಾಪಂ ಸದಸ್ಯರಾಗುವ ಕನಸು ಹೊತ್ತಿರುವ ಆಕಾಂಕ್ಷಿಗಳು ಈಗಿನಿಂದಲೇ ಪಕ್ಷಗಳ ಮುಖಂಡರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ನಿರ್ಧರಿಸಿರುವವರು ಪಕ್ಷದ ಹಿರಿಯ ಮುಖಂಡರು ಹಾಗೂ ಜಿಲ್ಲಾಧ್ಯಕ್ಷರನ್ನು ಸಂಪರ್ಕಿಸುತ್ತಿದ್ದಾರೆ. ಈ ಬಾರಿ ತಾಪಂಗಿಂತಲೂ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಲು ರಾಷ್ಟ್ರೀಯ ಪಕ್ಷಗಳ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದವರು ಮತ್ತೊಮ್ಮೆ ಚುನಾವಣಾ ಅಖಾಡಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದರೆ ಹೊಸ ಮುಖಗಳೂ ರಾಜಕೀಯ ಪ್ರವೇಶಕ್ಕೆ ಉತ್ಸುಕವಾಗಿವೆ.ಮೀಸಲಾತಿ ಪ್ರಕಟ;ಲೆಕ್ಕಾಚಾರ ತಲೆಕೆಳಗು:ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟ, ನಿರ್ದಿಷ್ಟ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಕ್ಷೇತ್ರಗಳ ಮೀಸಲಾತಿ ಕೆಲ ಹಾಲಿ ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರವೇ ತಲೆಕೆಳಗಾಗಿದೆ. ಈ ಹಿನ್ನೆಲೆ ಕೆಲವರು ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಚುನಾವಣೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು, ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಕುರಿತು ಸಭೆ ಕರೆದು ಚರ್ಚಿಸಲು ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ತಯಾರಿ ಕಂಡು ಬಂದಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಗುರುತಿಸುವ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ, ಸಭೆ ಕರೆದು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಜಿಪಂ ಹಾಗೂ ತಾಪಂ ಚುನಾವಣೆ ಮೀಸಲಾತಿ ಪ್ರಕಟ ಬಳಿಕ ಈಗಾಗಲೇ ಅನೇಕರು ಸಂಪರ್ಕಿಸಿ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಸದ್ಯ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಚುನಾವಣೆ ಬಳಿಕ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜಿಲ್ಲಾ ಹಾಗೂ ತಾಪಂ ಚುನಾವಣೆ ಕುರಿತು ಚರ್ಚಿಸಿ ಮುಂದಿನ ಹಂತದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಬಳ್ಳಾರಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ತಿಳಿಸಿದ್ದಾರೆ.