ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತ್ರೈ ವಾರ್ಷಿಕ ಚುನಾವಣೆ ನಡೆಸುವ ವಿಷಯ ಕೋರ್ಟ್‌ನಲ್ಲಿರುವುದರಿಂದ ಅಲ್ಲಿ ಬರುವ ಆದೇಶ ನೋಡಿಕೊಂಡು ಚುನಾವಣೆ ನಡೆಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.ಬಿಜೆಪಿಯ ಶಶೀಲ್ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಜ್ಞಾನ ಪರಿಷತ್ತಿನ ಸದಸ್ಯರಾಗಲು ಅನೇಕ ನಿಯಮಗಳನ್ನು ಬೈಲಾದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ 2235 ಅರ್ಜಿದಾರರ ಸದಸ್ಯತ್ವ ಶುಲ್ಕವನ್ನು ಒಬ್ಬನೇ ವ್ಯಕ್ತಿ ಒಂದೇ ದಿನ 39 ಲಕ್ಷ ರು.ಗಳನ್ನು ಬ್ಯಾಂಕ್‌ಗೆ ಜಮೆ ಮಾಡಿದ್ದಾರೆ. ಅದೇ ದಿನದಂದು ಕಾರ್ಯಕಾರಿ ಸಮಿತಿ ಸಭೆ ಎಲ್ಲ ಅರ್ಜಿಗಳನ್ನು ಅನುಮೋದಿಸಿದೆ. ಇದು ಕಾನೂನು ಬಾಹಿರ. ಅಲ್ಲದೆ, ಸದಸ್ಯತ್ವದ ಅರ್ಜಿಗಳು ಸಹ ಅಪೂರ್ಣವಾಗಿದೆ. ಇದು ಸಂಶಯಕ್ಕೆ ಕಾರಣವಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣವಿದೆ. ಚುನಾವಣೆ ನಡೆಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಕೋರ್ಟ್‌ನಲ್ಲಿ ಬರುವ ತೀರ್ಮಾನ ನೋಡಿಕೊಂಡು ಚುನಾವಣೆ ಮಾಡಲಾಗುವುದು ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಶೀಲ್ ಜಿ.ನಮೋಶಿ, 2235 ಅರ್ಜಿಗಳು ಕೇವಲ ಒಂದೇ ಜಿಲ್ಲೆಗೆ ಸೇರಿಲ್ಲ, ಬೇರೆ ಬೇರೆ ಜಿಲ್ಲೆಗಳ ಜನ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದೂರದ ಊರುಗಳ ಜನ 2 ಸಾವಿರ ರು. ಸದಸ್ಯತ್ವ ಶುಲ್ಕ ಕಟ್ಟಲು ನಾಲ್ಕೈದು ಸಾವಿರ ವೆಚ್ಚ ಮಾಡಿ ಬೆಂಗಳೂರಿಗೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲ ಅರ್ಜಿಗಳನ್ನು ಸೇರಿಸಿ ಒಂದೇ ಬಾರಿ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಸರ್ಕಾರ ಸಲ್ಲಿಸಿರುವ ಅರ್ಜಿಗಳು ಮಾನದಂಡದ ಪ್ರಕಾರ ಇದೆಯೇ ಎಂಬುದನ್ನು ಪರಿಶೀಲಿಸಬೇಕು, ಆದಷ್ಟು ಬೇಗ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.