ಸರ್ಕಾರದಿಂದ ಪ್ರತಿಕ್ರಿಯೆ ಬಂದೊಡನೆ ಚುನಾವಣೆ ನಿಗದಿ

KannadaprabhaNewsNetwork | Published : May 24, 2025 12:51 AM
ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.
Follow Us

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಈ ಕುರಿತು ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಶುಕ್ರವಾರ ಮಹಾನಗರಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿವಮೊಗ್ಗ ಪಾಲಿಕೆಯಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದೆ ಒಂದೂವರೆ ವರ್ಷ ಆಗಿದೆ. ಚುನಾವಣೆ ನಡೆಸಲು ಮೀಸಲಾತಿ ಪಟ್ಟಿ ನೀಡುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದೆ. ಸಂಬಂಧಿಸಿದ ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಸಹ ಕೋರಲಾಗಿತ್ತು. ಸರ್ಕಾರದಿಂದ ಈ ಕುರಿತು ಸ್ಪಂದನೆ ಬಾರದ ಕಾರಣ ಸುಪ್ರೀಂ ಕೋರ್ಟ್ ಆದೇಶದನ್ವಯ ಉಚ್ಚ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿ ಪಾಲಿಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಜೂನ್ ವೇಳೆಗೆ ಉಚ್ಚ ನ್ಯಾಯಾಲಯದಲ್ಲಿ ಈ ರಿಟ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಚುನಾವಣೆ ಕುರಿತು ಸರ್ಕಾರದಿಂದ ಸ್ಪಂದನೆ ಬಂದ ತಕ್ಷಣ ದಿನಾಂಕ ನಿಗದಿಗೊಳಿಸಲಾಗುವುದು. ಕಳೆದ ಆಗಸ್ಟ್ ಮಾಹೆಯಲ್ಲಿಯೇ ಚುನಾವಣೆಗೆ ಸಂಬಂಧಿಸಿದಂತೆ ಮತದಾತರರ ಪಟ್ಟಿ ತಯಾರಿಸುವ ವೇಳಾಪಟ್ಟಿ ಹೊರಡಿಸಲಾಗಿತ್ತು. ಕಾರಣಾಂತರದಿಂದ ಅದರ ಪ್ರಕಾರ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿಲ್ಲ. ಕರಡು ಮತದಾರರ ಪಟ್ಟಿ ಮಾತ್ರ ಸಿದ್ಧವಾಗಿದೆ ಎಂದರು.ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಿಶೇಷವಾಗಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಸಿದ್ಧ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ನ್ಯಾಯ ಮತ್ತು ಮುಕ್ತ ಚುನಾವಣೆ ನಡೆಸಲು ಎಲ್ಲ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.ಮಹಾನಗರಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ವೇಳಾಪಟ್ಟಿ ಹೊರಡಿಸಲಾಗಿದ್ದು, 2024ರ ಸೆ.17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವುದು ಸೇರಿದಂತೆ ಎಲ್ಲ ವೇಳಾಪಟ್ಟಿಯನ್ನು ಸಿದ್ಧ ಮಾಡಲಾಗಿತ್ತು. ಆದರೆ ಆ ವೇಳಾ ಪಟ್ಟಿಯಂತೆ ಅಂತಿಮ ಮತದಾರರ ಪಟ್ಟಿಯನ್ನು ಕಾರಣಾಂತರಗಳಿಂದ ಪ್ರಕಟಿಸಲಾಗಿರಲಿಲ್ಲ ಎಂದರು.ಇದೀಗ ಕರಡು ಮತದಾರರ ಪಟ್ಟಿ ಸಿದ್ಧವಾಗಿದೆ. ಚುನಾವಣೆ ನಡೆಸಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು 2011ರ ಜನಗಣತಿ ಪ್ರಕಾರ 3.22 ಲಕ್ಷ ಜನಸಂಖ್ಯೆ ಇದೆ. ಒಟ್ಟು 288 ಮತಗಟ್ಟೆಗಳಿವೆ. 2024-2025 ರಂತೆ 133479 ಪುರುಷ, 141480 ಮಹಿಳೆ, 17 ಇತರೆ ಸೇರಿದಂತೆ 274976 ಮತದಾರರು ಇದ್ದಾರೆ. ಇದರಲ್ಲಿ 85 ವರ್ಷ ಮೀರಿದ 2583 ಹಾಗೂ ವಿಕಲಚೇತನ 1465 ಮತದಾರರು ಇದ್ದಾರೆ.- ಡಾ.ಕವಿತಾ ಯೋಗಪ್ಪನವರ್, ಪಾಲಿಕೆ ಆಯುಕ್ತರು.