ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮನವಿ ಮಾಡಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಚುನಾವಣಾ ಪೂರ್ವ ಸಂಬಂಧ ನೇಮಿಸಿರುವ ಸೆಕ್ಟರ್ ಮತ್ತು ಪೋಲೀಸ್ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.ಆಯೋಗ ಕೇಳುವ ಮಾಹಿತಿ ನೀಡಿ
ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಚುನಾವಣಾ ಆಯೋಗ ಅಪೇಕ್ಷಿಸುವ ಮಾಹಿತಿಯನ್ನು ನಿಯಮಿತವಾಗಿ, ಕಾಲೋಚಿತವಾಗಿ ಜಿಲ್ಲೆಯಿಂದ ವರದಿಗಳನ್ನು ನಿಗದಿತ ಅವಧಿಯ ಒಳಗೆ ಸ್ಪಷ್ಟ ಹಾಗೂ ಖಚಿತವಾಗಿ ನೀಡಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿರುವವರು ನಿಗದಿತ ಸಮಯಕ್ಕೆ ಮುಂಚಿತವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಪಾಳಿ ಮೇಲೆ ಕರ್ತವ್ಯ ನಿರ್ವಹಿಸುವವರು ಇನ್ನೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವವರೆಗೂ ಬಿಡುಗಡೆಯಾಗಬಾರದು ಎಂದು ತಿಳಿಸಿದರು.ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗಬಹುದು. ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ, ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆಗೆ ಸಂಬಂಧಪಟ್ಟ ವೆಚ್ಚಗಳನ್ನು ನಿರಂತರವಾಗಿ ನಿಗಾ ಇಡಬೇಕು, ಯಾವ ವೆಚ್ಚ ನಿಯಮಾವಳಿ ರೀತ್ಯ ಇದೆ, ಅಕ್ರಮ ವೆಚ್ಚವಾಗಿದೆ. ಎನ್ನುವುದನ್ನು ಚುನವಣಾ ಆಯೋಗದ ನಿರ್ದೇಶನಗಳಂತೆ ಲೆಕ್ಕಹಾಕಿ ಮೇಲಿನ ಅಧಿಕಾರಿಗಳಿಗೆ ಕಾಲ ಕಾಲಕ್ಕೆ ಸಮರ್ಪವಾಗಿ ವರದಿ ಮಾಡಬೇಕು ಎಂದರು.
ನಿಯಮ ಉಲ್ಲಂಘಿಸಿದರೆ ಕ್ರಮಜಿ.ಪಂ.ಮುಖ್ಯ ನಿರ್ವಹಣಾಧಿಕಾರಿ ಪ್ರಕಾಶ ಜಿ.ಟಿ ನಿಟ್ಟಾಲಿ ಮಾತನಾಡಿ, ಚುನಾವಣಾಯ ನೀತಿ ಸಂಹಿತೆಯ ನಿಯಮಗಳನ್ನು ಯಾವುದೇ ವ್ಯಕ್ತಿ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಚುನವಣಾ ಆಯೋಗದ ನಿರ್ದೇಶನಗಳಂತೆ ತಮಗೆ ನಿಯೋಜಿತ ಕೆಲಸಗಳನ್ನು ಸರಿಯಾಗಿ ನಿರ್ವಹಿಸಬೇಕು, ಅಧಿಕಾರಿಗಳು ನಿಯಮಾವಳಿ ರೀತ್ಯಾ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಚುನಾವಣಾ ಕರ್ತವ್ಯಗಳಲ್ಲಿ ಲೋಪವಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಲೋಪಗಳನ್ನು ಚುನಾವಣಾ ಆಯೋಗ ಸಹಿಸುವುದಿಲ್ಲ. ಗೈರುಹಾಜರಾದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ
ಜಿಲ್ಲಾಪೋಲಿಸ್ ವರಿಷ್ಠಧಿಕಾರಿ ಡಿ.ಎಲ್.ನಾಗೇಶ್ ಮಾತನಾಡಿ, ಚೆಕ್ ಪೂಸ್ಟ್ ಗಳಲ್ಲಿ ಅಕ್ರಮವಾಗಿ ಸಾಗಿಸುವ ಉಡುಗೊರೆ ನೀಡುವಂತಹ ವಸ್ತುಗಳು, ಮದ್ಯ, ಮಾದಕ ವಸ್ತುಗಳು,ಹಣ ಸಿಕ್ಕಿದಲ್ಲಿ ವೀಡಿಯೋಗ್ರಾಫಿಯೊಂದಿಗೆ ಸೆರೆಯಿಡಿಯಬೇಕು. ಚುನಾವಣಾ ಸಂದರ್ಭದಲ್ಲಿ ಸಂಭವಿಸುವ ಜಗಳ,ಗಲಾಟೆಯ ತಡೆಯಲು ಸಿದ್ದರಿರಬೇಕು ಎಂದು ತಿಳಿಸಿ ಸೂಕ್ತ ಬಂದೋಬಸ್ತ್ ಒದಗಿಸುವ ಸಂಬಂಧ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳಿಗೊ ಮಿತಿ ಇರುತ್ತದೆ. ಅವರು ಮಾಡಿರುವ ವೆಚ್ಚಗಳು ಮಿತಿಯ ಒಳಗೆ ಇವೆಯೇ, ಇಲ್ಲವೇ ಎಂಬುದನ್ನು ತಿಳಿಯಬೇಕಾದರೆ ಚುನಾವಣಾ ವೆಚ್ಚದ ಮೇಲೆ ನೀಗಾ ಇಡುವ ಎಂಸಿಎಂಸಿ, ವಿವಿಟಿ, ವಎಸ್ ಟಿ, ಎಸ್ ಎಸ್ ಟಿ, ಎಫ್ ಎಸ್ ಟಿ, ತಂಡಗಳ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ವೆಚ್ಚದ ಅಧಿಕಾರಿಗಳು ನಿಯಮಾವಳಿ ರೀತ್ಯಾ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಚುನಾವಣಾ ಕರ್ತವ್ಯಗಳಲ್ಲಿ ಲೋಪವಾಗುತ್ತದೆ ಎಂದರು.
ಚುನಾವಣಾ ಆಯೋಗದ ರಾಜ್ಯ ಮಟ್ಟದ ಸಂಪನ್ಮೂಲ ಅಧಿಕಾರಿ ಶಂಕರ್ ರೆಡ್ಡಿ ಅವರು ಚುನಾವಣೆ ಕಾರ್ಯಗಳನ್ನು ನಿರ್ವಹಿಸಲು ಬೇಕಿರುವ ಅಗತ್ಯ ಮಾಹಿತಿಗಳನ್ನು ನೀಡಿದರು. ಕಾರ್ಯಾಗಾರದಲ್ಲಿ ಉಪವಿಭಾಗಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ಚುನವಣಾ ವೆಚ್ಚ ಅಧಿಕಾರಿ ಎನ್.ಹರೀಶ್, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್, ಚುನಾವಣಾ ಸಿಂಬ್ಬಂದಿ ಮತ್ತು ಪೋಲೀಸ್ ಅಧಿಕಾರಿಗಳುಇದ್ದರು.