- 2025ರ ಜ.1ಕ್ಕೆ 18 ವರ್ಷದವರ ಹೆಸರು ಸೇರ್ಪಡೆಗೆ ಅವಕಾಶ
ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು, 2025ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಪ್ರಸ್ತುತ 17 ವರ್ಷ ತುಂಬಿದ್ದು, 18ನೇ ವರ್ಷದಲ್ಲಿ ನಡೆಯುತ್ತಿದ್ದು, ಬರುವ ಜನವರಿ 1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದು. ಹೊಸದಾಗಿ ನೋಂದಾಯಿಸಲು ನಮೂನೆ-6, ಹೆಸರು ಕೈಬಿಡಲು ನಮೂನೆ-7, ತಿದ್ದುಪಡಿ, ಸ್ಥಳಾಂತರ, ವಿಶೇಷಚೇತನರ ಗುರುತಿಸುವಿಕೆಗೆ ನಮೂನೆ-8, ವಿದೇಶದಲ್ಲಿ ನೆಲೆಸಿರುವ ಭಾರತೀಯವರು ನಮೂನೆ-6ಎ ಅಡಿ ವಿವರವನ್ನು ಭರ್ತಿ ಮಾಡಿ ಮತದಾರರ ನೋಂದಣಾಧಿಕಾರಿಗಳಿಗೆ ನೀಡಬೇಕು.ವೋಟರ್ ಹೆಲ್ಪ್ ಲೈನ್ ಆಪ್ ಅಥವಾ ವೆಬ್‌ಸೈಟ್ ಮೂಲಕವೂ ನೋಂದಣಿ, ತಿದ್ದುಪಡಿ, ವರ್ಗಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ. ದಾವಣಗೆರೆ ಮತ್ತು ಹೊನ್ನಾಳಿ ಉಪವಿಭಾಗಾಧಿಕಾರಿಗಳು, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಮತದಾರರ ನೋಂದಣಾಧಿಕಾರಿಗಳಾಗಿದ್ದು, ಆಯಾ ತಾಲೂಕಿನ ತಹಸೀಲ್ದಾರರು, ಪಾಲಿಕೆ ಪರಿಷತ್ತು ಕಾರ್ಯದರ್ಶಿ ಸಹಾಯಕ ಮತದಾರರ ನೋಂದಣಾಧಿಕಾರಿ ಆಗಿರುತ್ತಾರೆ.
- - - ಬಾಕ್ಸ್ * ಪರಿಷ್ಕರಣೆ ಅವಧಿ ಮತದಾರರ ಪಟ್ಟಿಯ ಕರಡು ಪಟ್ಟಿಯನ್ನು 2024ರ ಅಕ್ಟೋಬರ್ 29ರಂದು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳು ಇದ್ದಲ್ಲಿ 2024ರ ನ.28 ರೊಳಗೆ ಸಲ್ಲಿಸಬಹುದು. ಈ ಅವಧಿಯಲ್ಲಿನ ಎರಡನೇ ಶನಿವಾರ, ಭಾನುವಾರ ರಜಾ ದಿನಗಳಂದು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಎಲ್ಲ ಆಕ್ಷೇಪಣೆಗಳನ್ನು 2024ರ ಡಿ.24 ರೊಳಗೆ ಇತ್ಯರ್ಥಪಡಿಸಿ, 2025ರ ಜ.6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.