ಶಿಗ್ಗಾಂವಿ: ಹುಲಗೂರಿನ ಭಾವೈಕ್ಯತೆಯ ಸ್ಥಳವಾದ ಹಜರೇಷಾ ಖಾದ್ರಿ ದರ್ಗಾಕ್ಕೆ ಉರೂಸ್ ವೇಳೆಯಲ್ಲಿ ಲಕ್ಷಾಂತರ ಭಕ್ತರು ಬರುವ ಉದ್ದೇಶದಿಂದ ವಿದ್ಯುತ್ ವೊಲ್ಟೇಜ್ ತೊಂದರೆ ಸಾಕಷ್ಟು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಹೆಸ್ಕಾಂ ಇಲಾಖೆಯಿಂದ ೧೨ ಲಕ್ಷ ವೆಚ್ಚದಲ್ಲಿ ನೂತನ ವಿದ್ಯುತ್ ದೀಪಗಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್. ಖಾದ್ರಿ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರು ೬ ಲೈನ್ ರಸ್ತೆಯ ಸಲುವಾಗಿ ೫ ಕೋಟಿ ರು. ಮಂಜೂರಾತಿ ಮಾಡಿದ್ದು ಅದಕ್ಕೆ ಕೆಲವರು ಅಡತಡೆ ಮಾಡುತ್ತಿದ್ದಾರೆ. ನಮಗೆ ಯಾವುದೇ ಮುಚ್ಚಿಟ್ಟು ಅಭಿವೃದ್ಧಿ ಮಾಡುವ ಪ್ರಮೇಯವಿಲ್ಲ, ಭಾವೈಕ್ಯತೆಯ ಸ್ಥಳವಾಗಿರುವುದರಿಂದ ನಮ್ಮ ಮನೆತನದವರು ಕೂಡಿ ಮಾಡುತ್ತೇವೆ. ಕೆಲ ಜನಪ್ರತಿನಿಧಿಗಳು ಅಡ್ಡಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಹಣ ತಂದಿದ್ದೇವೆಂದು ತಿಳಿದು ರಾತ್ರೋರಾತ್ರಿ ಕಾರಡಗಿಗೆ ೫೦ ಲಕ್ಷಗಳನ್ನು ಬದಲಾಯಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ, ನಮ್ಮ ಅಣ್ಣನವರನ್ನು ಕೋರ್ಟಿಗೆ ಎಳೆದಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
ದರ್ಗಾ ಅಭಿವೃದ್ಧಿಯಲ್ಲಿ ಯಾವುದೇ ಪಕ್ಷಗಳ ಹಸ್ತಕ್ಷೇಪ ಇಲ್ಲ. ಆದರೆ ಈಗಿನ ಜನಪ್ರತಿನಿಧಿಯೋರ್ವ ಹಸ್ತಕ್ಷೇಪ ಮಾಡುತ್ತಿದ್ದಾನೆ, ದರ್ಗಾ ಬೆಳವಣಿಗೆಗೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಹಿರಿಯರಿದ್ದಾರೆ ಅವರನ್ನು ಕೇಳಿ ಅಭಿವೃದ್ಧಿ ಮಾಡುವುದು ಮುಖ್ಯವಾಗಿದೆ ಎಂದರು.ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ನೀಡಿದ ೫೦ ಲಕ್ಷಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ನನ್ನ ೩೦ ವರ್ಷದ ರಾಜಕಾರಣದಲ್ಲಿ ದರ್ಗಾದಲ್ಲಿ ಪಕ್ಷದ ಚಿಹ್ನೆ ಜಾತಿ ಬಳಸಿ ರಾಜಕಾರಣ ಮಾಡಿಲ್ಲ. ದರ್ಗಾಕ್ಕೆ ಎಲ್ಲ ಪಕ್ಷದ ಮುಖಂಡರೂ, ಎಲ್ಲಾ ಸಮುದಾಯದವರು ಬರುತ್ತಾರೆ, ಆದರೆ ಕೆಲವರು ದರ್ಗಾದ ಅಭಿವೃದ್ಧಿ ಭಾಗವಾದ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುವುದು ಸರಿಯಲ್ಲ, ಅಂಜುಮನ್ ಅಧ್ಯಕ್ಷರೂ ಒಪ್ಪಿದ್ದಾರೆ ಎಂದರು.