ವಿದ್ಯುತ್ ಅವಘಡ: ಕೈ ಕಳೆದುಕೊಂಡ 7 ವರ್ಷ ಬಾಲಕ

KannadaprabhaNewsNetwork |  
Published : Sep 12, 2025, 12:06 AM IST
ಬಳ್ಳಾರಿಯ ಟ್ರಾಮಾಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ವಿಶ್ವಜ್ಞಾಚಾರಿ.  | Kannada Prabha

ಸಾರಾಂಶ

ಮನೆಯ ಮೇಲೆ ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಬಾಲಕನೋರ್ವನ ಬಲಗೈ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಸಂಭವಿಸಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಬಾಲಕನ ಕುಟುಂಬ ಆಪಾದಿಸಿದೆ.

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದೂರುಕನ್ನಡಪ್ರಭ ವಾರ್ತೆ ಬಳ್ಳಾರಿ

ಮನೆಯ ಮೇಲೆ ಆಟವಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಬಾಲಕನೋರ್ವನ ಬಲಗೈ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಸಂಭವಿಸಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಬಾಲಕನ ಕುಟುಂಬ ಆಪಾದಿಸಿದೆ.

ನಗರದ ವಿರಾಟನಗರ (ಗವಾಯಿ ಕಾಲನಿ) ನಿವಾಸಿ ವಿ. ಶಿವಚಾರಿ ಎಂಬವರ ಪುತ್ರ 7 ವರ್ಷದ ವಿಶ್ವಜ್ಞಾಚಾರಿ ಮನೆಯ ಮೇಲೆ ತಂತಿಯ ವೈರ್ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಮನೆಯ ಬಳಿಯೇ ಹಾದುಹೋಗಿರುವ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಬಾಲಕನಿಗೆ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಬಾಲಕನನ್ನು ಬಿಎಂಸಿಆರ್‌ಸಿ ಆಸ್ಪತ್ರೆ ಹಾಗೂ ಟ್ರಾಮಾಕೇರ್ ಸೆಂಟರ್‌ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ವಿದ್ಯುತ್ ಸ್ಪರ್ಶದಿಂದ ಬಲಗೈ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಬಾಲಕನ ಕೈ ಕತ್ತರಿಸಲಾಗಿದ್ದು, ಮಗುವಿನ ಭವಿಷ್ಯದ ಬಗ್ಗೆ ಪೋಷಕರು ತೀವ್ರ ಆತಂಕಗೊಂಡಿದ್ದಾರೆ.

ಮಗುವಿನ ಭವಿಷ್ಯ ಮಂಕು:

ವಿದ್ಯುತ್ ಸಂಪರ್ಕ ನೀಡುವ ವೇಳೆ ಸುರಕ್ಷತಾ ವಿಧಾನ ಅನುಸರಿಸದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ನನ್ನ ಮಗನ ಈ ಸ್ಥಿತಿಗೆ ಕಾರಣ ಎಂದು ವಿ. ಶಿವಾಚಾರಿ ಬ್ರೂಸ್‌ಪೇಟೆ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ನಮ್ಮ ಮನೆಯ ಬಳಿ ಸರಿತಪ್ರಿಯ ಎನ್ನುವರು 6 ಅಂತಸ್ತಿನ ಮನೆ ನಿರ್ಮಿಸಿದ್ದು, 11 ಕೆವಿ ಸಾಮರ್ಥ್ಯದ ವಿದ್ಯುತ್ ವೈರ್‌ಗಳು ಮನೆಯ ಪಕ್ಕದಲ್ಲಿಯೇ ಹಾದು ಹೋಗಿವೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡಿಸುವ ವೇಳೆ ವಿದ್ಯುತ್ ವೈರ್‌ಗಳನ್ನು ಅತಿ ಎತ್ತರದಲ್ಲಿ ಅಳವಡಿಸಿ, ಸುರಕ್ಷತೆಗೆ ವೈರ್‌ಗಳಿಗೆ ಪೈಪ್‌ಗಳನ್ನು ಹಾಕಿ ಎಂದು ಜೆಸ್ಕಾಂ ಸಿಬ್ಬಂದಿಗೆ ಹೇಳಿದರೂ ಮನೆಗೆ ತಾಕುವಂತೆ ಯಾವುದೇ ಸುರಕ್ಷತಾ ವಿಧಾನಗಳನ್ನು ಅಳವಡಿಸಿದೆ ಕೆಳಭಾಗದಲ್ಲಿ ವಿದ್ಯುತ್ ತಂತಿ ಅಳವಡಿಸಿದ್ದಾರೆ. ಇದರಿಂದಾಗಿಯೇ ಮಗು ಆಟವಾಡುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಕೈ ಕತ್ತರಿಸುವ ಸ್ಥಿತಿ ಬಂದಿದೆ. ಇದಕ್ಕೆ ಜೆಸ್ಕಾಂ ಅಧಿಕಾರಿಗಳು ಹಾಗೂ ಸರಿತಾಪ್ರಿಯ ಮನೆಯ ಮಾಲೀಕರೇ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ