ದಸರಾ ದೀಪಾಲಂಕಾರ ಆಕರ್ಷಕ, ವಿನೂತನವಾಗಿರಲಿ

KannadaprabhaNewsNetwork |  
Published : Aug 09, 2025, 02:02 AM IST
31 | Kannada Prabha

ಸಾರಾಂಶ

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜೊತೆಗೆ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳು ಹಾಗೂ ವಿದ್ಯುತ್‌ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಸೂಚಿಸಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಸಂದರ್ಭದಲ್ಲಿ ಮಾಡಲಾಗುವ ದೀಪಾಲಂಕಾರ ಎಲ್ಲರ ಗಮನ ಸೆಳೆಯಲಿದೆ. ಹೀಗಾಗಿ, ಈ ಬಾರಿಯ ದೀಪಾಲಂಕಾರವನ್ನು ಕಳೆದ ವರ್ಷಕ್ಕಿಂತ ಹೆಚ್ಚು ಆಕರ್ಷಕವಾಗಿ ಮಾಡಲು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಿಗಮದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ದಸರಾ ದೀಪಾಲಂಕಾರ ವಿಶ್ವಮಟ್ಟದಲ್ಲಿ ಆಕರ್ಷಣೀಯಗೊಳಿಸಲು ಸೆಸ್ಕ್‌ ಜೊತೆಗೆ ವಿದ್ಯುತ್‌ ಗುತ್ತಿಗೆದಾರರು ಪ್ರಮುಖ ಕಾರಣರಾಗಿದ್ದಾರೆ. ಈ ಬಾರಿಯೂ ದೀಪಾಲಂಕಾರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ದಸರಾ ಆರಂಭದಲ್ಲಿ ಹಾಗೂ ದಸರಾ ಮುಗಿದ ಬಳಿಕವೂ ಎಲ್ಲರನ್ನೂ ಆಕರ್ಷಿಸುವ ದೀಪಾಲಂಕಾರವನ್ನು ಹೊಸತನದ ಜೊತೆಗೆ ಹೆಚ್ಚು ಆಕರ್ಷಕವಾಗಿ ಮಾಡುವ ಬಗ್ಗೆ ಈಗಿನಿಂದಲೇ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ದೀಪಾಲಂಕಾರವನ್ನು ಹೆಚ್ಚಿನ ಆಕರ್ಷಣೀಯವಾಗಿ ಮಾಡುವುದು ಮಾತ್ರವಲ್ಲದೇ ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ದೀಪಾಲಂಕಾರ ಮಾಡುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.

ದಸರಾ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದವನ್ನು ಹೆಚ್ಚಿಸುವುದರ ಜತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯವಾಗಿದೆ. ದಸರಾ ವೇಳೆಯಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರಲಿದೆ. ಆದ್ದರಿಂದ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಎಚ್ಚರವಹಿಸಿ, ದೀಪಾಲಂಕಾರ ಮಾಡುವಲ್ಲಿ ಹೆಚ್ಚಿನ ಗಮನವಹಿಸಬೇಕೆಂದು ಎಂದರು.

ರೂಪುರೇಷೆಗಳು ಸಿದ್ಧ

ದಸರಾ ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಈ ಬಾರಿ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ಜೊತೆಗೆ ನಗರದಲ್ಲಿರುವ ವೃತ್ತಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಬೇಕೆಂದು ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯವಿರುವ ರೂಪುರೇಷೆಗಳು, ಕೆಲವೊಂದು ಡಿಸೈನ್‌ ಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ದಸರಾ ಆರಂಭದಿಂದಲೇ ದೀಪಾಲಂಕಾರಕ್ಕೂ ಚಾಲನೆ ದೊರೆಯಲಿದೆ. ಹೀಗಾಗಿ ದೀಪಾಲಂಕಾರ ಮಾಡುವ ಜವಾಬ್ದಾರಿ ಹೊತ್ತವರು ಕೊನೆಯ ಹಂತದವರೆಗೂ ಕೆಲಸ ಮಾಡದೆ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಕೆಲವೊಂದು ರಸ್ತೆಗಳಲ್ಲಿ ಮಾಡಲಾಗಿದ್ದ ದೀಪಾಲಂಕಾರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಹೀಗಾಗಿ ಈ ಬಾರಿ ಇಂತಹ ಸಮಸ್ಯೆಗಳು ಆಗದಂತೆ ನಿಗಾ ವಹಿಸಿ, ನಿಗದಿತ ಸಮಯಕ್ಕೆ ದೀಪಾಲಂಕಾರದ ಕೆಲಸಗಳನ್ನು ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಸುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಹೆಚ್ಚಿನ ಆಕರ್ಷಣೆಯಿಂದ ಕೂಡಿರಬೇಕಿದೆ. ಯುವ ಸಂಭ್ರಮ ಕಾರ್ಯಕ್ರಮ ದಸರಾ ಆರಂಭಕ್ಕೂ ಮೊದಲೇ ನಡೆಯುವುದರಿಂದ ಈ ಸ್ಥಳದಲ್ಲಿ ಮಾಡಲಾಗುವ ದೀಪಾಲಂಕಾರ ಎಲ್ಲರ ಆಕರ್ಷಣೆ ಮತ್ತು ಕುತೂಹಲವನ್ನು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಈ ಭಾಗಗಳಲ್ಲಿ ದೀಪಾಲಂಕಾರ ಮಾಡುವವರು ಇದನ್ನು ಗಮನದಲ್ಲಿಟ್ಟುಕೊಂಡು ದೀಪಾಲಂಕಾರ ಮಾಡಬೇಕಿದೆ ಎಂದರು.

ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮೈಸೂರು ವಲಯ ಕಚೇರಿಯ ಮುಖ್ಯ ಎಂಜಿನಿಯರ್‌ ಮೃತ್ಯುಂಜಯ, ಮೈಸೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಸುನೀಲ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್‌ ಮೊದಲಾದವರು ಇದ್ದರು.

----

ಬಾಕ್ಸ್‌

ಡ್ರೋನ್‌ ಶೋಗೆ ಇನ್ನಷ್ಟು ಮೆರಗು

ಕಳೆದ ವರ್ಷದ ದಸರಾ ಸಂದರ್ಭದಲ್ಲಿ ನಡೆದ ಡ್ರೋನ್‌ ಪ್ರದರ್ಶನ ಎಲ್ಲರ ಆಕರ್ಷಣೆ ಮತ್ತು ಮೆಚ್ಚುಗೆ ಪಡೆದಿತ್ತು. ಹೀಗಾಗಿ ಡ್ರೋನ್‌ ಶೋ ಕುರಿತಂತೆ ಜನರ ನಿರೀಕ್ಷೆಗಳು ಹೆಚ್ಚಾಗಿರಲಿದೆ. ಆದ್ದರಿಂದ ಈ ಬಾರಿಯ ಡ್ರೋನ್‌ ಶೋ ಕಾರ್ಯಕ್ರಮದ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಡ್ರೋನ್‌ ಬಳಸಿ ಹೆಚ್ಚು ಆಕರ್ಷಣೀಯವಾಗಿಸಲು ಚಿಂತನೆ ನಡೆಸಲಾಗುತ್ತಿದೆ.

- ಕೆ.ಎಂ. ಮುನಿಗೋಪಾಲ್‌ ರಾಜು, ಸೆಸ್ಕ್ ಎಂಡಿ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ