ನಿರ್ವಹಣೆ ಇಲ್ಲದೆ ಮರಣಕೂಪವಾದ ವಿದ್ಯುತ್‌ ನಿಯಂತ್ರಕಗಳು

KannadaprabhaNewsNetwork |  
Published : Sep 29, 2025, 01:03 AM IST
ಚಿತ್ರ: 28ಬಿಡಿಆರ್‌8ಔರಾದ್‌ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನಲ್ಲಿ ವಿದ್ಯುತ್‌ ನಿಯಂತ್ರಕದ ದುಸ್ಥಿತಿ. | Kannada Prabha

ಸಾರಾಂಶ

ಸುತ್ತಲೂ ಗಿಡ, ಕಂಟಿಗಳು, ಹುಲ್ಲು ಆವರಿಸಿಕೊಂಡು ರಸ್ತೆ ಪಕ್ಕದಲ್ಲಿ ಅಪಾಯದ ಮುನ್ಸೂಚನೆ ನೀಡುತ್ತ ವರ್ಷಗಳಿಂದ ನಿರ್ವಹಣೆ ಇಲ್ಲದೆ ನರಳುತ್ತಿರುವ ವಿದ್ಯುತ್‌ ನಿಯಂತ್ರಕಗಳು. ಅಧಿಕಾರಿಗಳು ನಿತ್ಯ ಸಂಚರಿಸುವ ರಸ್ತೆಯಲ್ಲಿಯೇ ಜೀವ ಬಲಿಗಾಗಿ ಬಾಯ್ತೆರೆದು ಕಾದಿರುವ ಟ್ರಾನ್ಸಫಾರಂ ದುರಾವಸ್ಥೆ ಕಣ್ಣಿಗೆ ಕಂಡರೂ ಕ್ರಮ ಕೈಗೊಳ್ಳದ ಜೆಸ್ಕಾಂ ಕಾರ್ಯವೈಖರಿಗೆ ಜೀವಂತ ಸಾಕ್ಷಿಯಾಗಿದೆ.

ಅನೀಲಕುಮಾರ್‌ ದೇಶಮುಖ್‌

ಕನ್ನಡಪ್ರಭ ವಾರ್ತೆ ಔರಾದ್‌

ಸುತ್ತಲೂ ಗಿಡ, ಕಂಟಿಗಳು, ಹುಲ್ಲು ಆವರಿಸಿಕೊಂಡು ರಸ್ತೆ ಪಕ್ಕದಲ್ಲಿ ಅಪಾಯದ ಮುನ್ಸೂಚನೆ ನೀಡುತ್ತ ವರ್ಷಗಳಿಂದ ನಿರ್ವಹಣೆ ಇಲ್ಲದೆ ನರಳುತ್ತಿರುವ ವಿದ್ಯುತ್‌ ನಿಯಂತ್ರಕಗಳು. ಅಧಿಕಾರಿಗಳು ನಿತ್ಯ ಸಂಚರಿಸುವ ರಸ್ತೆಯಲ್ಲಿಯೇ ಜೀವ ಬಲಿಗಾಗಿ ಬಾಯ್ತೆರೆದು ಕಾದಿರುವ ಟ್ರಾನ್ಸಫಾರಂ ದುರಾವಸ್ಥೆ ಕಣ್ಣಿಗೆ ಕಂಡರೂ ಕ್ರಮ ಕೈಗೊಳ್ಳದ ಜೆಸ್ಕಾಂ ಕಾರ್ಯವೈಖರಿಗೆ ಜೀವಂತ ಸಾಕ್ಷಿಯಾಗಿದೆ. ಔರಾದ್‌ ಹಾಗೂ ಕಮನಗರ ತಾಲೂಕಿನಾದ್ಯಂತ ಒಟ್ಟು 4 ಸಾವಿರಕ್ಕೂ ಅಧಿಕ ವಿದ್ಯುತ್‌ ನಿಯಂತ್ರಕಗಳು ಕೆಲಸ ಮಾಡ್ತಿವೆ. ರೈತರ ಗದ್ದೆಗಳು, ರಸ್ತೆ ಪಕ್ಕ, ಶಾಲೆಯ ಹತ್ತಿರ, ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್‌ ಸರಬರಾಜು ಮಾಡಲು ಅಗತ್ಯವಿರುವ ನಿಯಂತ್ರಕಗಳು ಸ್ಥಾಪಿಸಲಾಗಿದೆ. ಆದರೆ ನಿಯಂತ್ರಕಗಳಿಗೆ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ ಮಾಡ್ತಿರುವದರಿಂದ ಭಾರಿ ದುರಂತಕ್ಕೆ ಬಹುತೇಕ ನಿಯಂತ್ರಕಗಳು ಬಾಯ್ತೆರೆದು ನಿಂತ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರಿನ ಮುಖ್ಯ ಎದುರಿನಲ್ಲಿ ಎರಡು ಖಾಸಗಿ ಶಾಲೆಗಳಿವೆ. ಅಲ್ಲದೆ ಟಿಎಪಿಎಂಎಸ್‌ ಮಾರುಕಟ್ಟೆ ಕಾಂಪ್ಲೆಕ್ಸ್‌ ಪಕ್ಕದಲ್ಲಿಯೇ ಸಾವಿರಾರು ಜನರು ಓಡಾಡುವ ಮುಖ್ಯರಸ್ತೆಗೆ ಹೊಂದಿಕೊಂಡು ಇರುವ ನಿಯಂತ್ರಕದ ಸುತ್ತಲೂ ಹುಲ್ಲು, ಗಿಡ ಕಂಟಿಗಳು ಆವರಿಸಿಕೊಂಡಿದ್ದು ನೆಲ ಭಾಗದಲ್ಲಿ ಕಾಂಕ್ರಿಟ್‌ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಶಾಲಾ ಮಕ್ಕಳು ಓಡಾಡುವ ಭಾಗದಲ್ಲಿ ಇರುವ ನಿಯಂತ್ರಕ ಜನರ ಪಾಲಿಗೆ ಮೃತ್ಯುಕೂಪದಂತೆ ಪರಿವರ್ತನೆಗೊಂಡಿದೆ.

ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿ: ಜೆಸ್ಕಾಂ ಕಚೇರಿಗೆ ನಿತ್ಯ ಸಂಚರಿಸುವ ಎಇಇ ಹಾಗೂ ಜೆಇಗಳು ದುರಾವಸ್ಥೆಯಲ್ಲಿರುವ ವಿದ್ಯುತ್‌ ನಿಯಂತ್ರಕ ಕಂಡು ಕಾಣದಂತೆ ಮೌನವಾಗ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರಂ ಸರಿಪಡಿಸುವ ಗೋಜಿಗೆ ಹೋಗದ ಅಧಿಕಾರಿಗಳ ತಂಡ ಕೇವಲ ನಾಮ್‌ ಕೆ ವಾಸ್ತೆ ಎಂಬಂತೆ ಕಚೇರಿಗೆ ಹಾಜರಾಗಿ ಕಡತಗಳ ವಿಲೇವಾರಿ ಮಾಡಿ ಸಂಜೆಯಾಗ್ತಿದ್ದಂತೆ ಕೇಂದ್ರ ಸ್ಥಾನ ಬಿಟ್ಟು ಜಿಲ್ಲಾ ಕೇಂದ್ರದ ನಿವಾಸಗಳಿಗೆ ತೆರಳುವ ಪದ್ದತಿಯಿಂದಾಗಿ ಜೆಸ್ಕಾಂನ ಬಹುತೇಕ ಟ್ರಾನ್ಸ್‌ಫಾರಂಗಳು ನಿರ್ವಹಣೆಯಾಗದೆ ಮೂಲೆಗುಂಪಾಗಿ ಜನರ ಪಾಲಿಗೆ ಶಾಪವಾಗಿ ಕಾಡ್ತಿವೆ.

ಲೈನ್‌ಮನ್‌ಗಳ ದೇವರೇ ಕಾಪಾಡಬೇಕು:

ಹದಗೆಟ್ಟ ನಿಯಂತ್ರಕಗಳ ದುರಾವಸ್ಥೆಯಿಂದ ವಿದ್ಯುತ್ ದೋಷ ಸರಿಪಡಿಸಲು ಕೆಲಸ ಮಾಡಲು ಮುಂದಾಗುವ ಜೆಸ್ಕಾಂ ಲೈನ್‌ಮನ್‌ಗಳು ಜೀವ ಕೈಯಲ್ಲಿ ಹಿಡಿದು ಇಂಥ ಟಿಸಿಗಳ ಬಳಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲ್ಲು ಕಂಟಿಗಳ ನಡುವೆ ವಿದ್ಯುತ್ ತಂತಿಯನ್ನು ಹುಡುಕುವುದೇ ದೊಡ್ಡ ಸಾಹಸವಾಗಿದೆ.

ನಿತ್ಯ ಸಾವಿರಾರು ಜನರು ಹಾದು ಹೋಗುವ ದಾರಿ ಪಕ್ಕದಲ್ಲಿಯೇ ಗಿಡ ಗಂಟೆಗಳು ಬೆಳೆದುಕೊಂಡ ಟಿಸಿ ನೋಡಿದ್ರೆ ಭಯವಾಗುತ್ತೆ. ಪಕ್ಕದಲ್ಲೇ ಇರುವ ಬ್ಯಾಂಕಿನ ಕಟ್ಟೆಯ ಮೇಲೆ ನಿಂತರೂ ಕೈಗೆ ತಾಗುವಂತಿದೆ. ಅಪಾಯಕಾರಿಯಾಗಿ ಕಾಡುತ್ತಿರುವ ನಿಯಂತ್ರಕದ ನಿರ್ವಹಣೆ ಮಾಡದಿರುವುದು ದುರಂತ.

- ಶಿವಕುಮಾರ್ ಕುಡಲೆ, ಸ್ಥಳೀಯ ನಿವಾಸಿ

ಕಮಲನಗರ ಹಾಗೂ ಔರಾದ್ ತಾಲೂಕಿನ ಎಲ್ಲಾ ಹಳ್ಳಿಗಳಲ್ಲೂ ಮಳೆಗಾಲದಲ್ಲಿ ನಿಯಂತ್ರಕಗಳ ಸುತ್ತ ಹುಲ್ಲು ಬೆಳೆದು ಮಳೆ ನೀರು ಬಂದಾಗ ನೆಲಕ್ಕೆ ವಿದ್ಯುತ್‌ ಸಂಪರ್ಕಿಸುವ ಘಟನೆ ನಡೆದಿವೆ. ಬೇಸಿಗೆ ಕಾಲದಲ್ಲಿ ಅರ್ಥಿಂಗ್‌ ಇಲ್ಲದೆ ಅದೆಷ್ಟೋ ಟಿಸಿಗಳು ಕೆಲಸ ಮಾಡದೆ ವಿದ್ಯುತ್‌ ಕೈಕೊಟ್ಟ ಸ್ಥಿತಿ ಸಾಮಾನ್ಯ‌. ಇದನ್ನೆಲ್ಲ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.

- ರಾಜಕುಮಾರ್ ಅಲಬಿದೆ, ಸ್ಥಳೀಯ ಮುಖಂಡ

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ