ಕನ್ನಡಪ್ರಭ ವಾರ್ತೆ, ಯಳಂದೂರು
ತಾಲೂಕಿನ ಮದ್ದೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಮನೆಯೊಂದು ಭಸ್ಮವಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿರುವ ಘಟನೆ ನಡೆದಿದೆ.ಗ್ರಾಮದ ಚಿಕ್ಕನಂಜಮ್ಮ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಇದರಲ್ಲಿ ಚಿಕ್ಕನಂಜಮ್ಮ ಇವರ ಮಗ ಮಂಜುನಾಥ, ಇವರ ಪತ್ನಿ ಅಶ್ವಿನಿ ಹಾಗೂ 9 ತಿಂಗಳ ಹೆಣ್ಣು ಮಗು ವಾಸವಾಗಿದ್ದರು. ಮಂಜುನಾಥ ಎಂಬುವರು ಯಳಂದೂರಿಗೆ ತೆರಳಿದ್ದು ಇವರ ತಾಯಿ ಹಾಗೂ ಪತ್ನಿ ಮಗುವಿಗೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಇವರ ಮನೆಗೆ ಬೆಂಕಿ ಆವರಿಸಿದೆ. ಅಕ್ಕಪಕ್ಕದವರು ಬೆಂಕಿ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬೆಂಕಿಯನ್ನು ಆರಿಸಲು ಇವರು ಯತ್ನಿಸಿದ್ದಾರೆ.ಆದರೆ ಅಷ್ಟೊತ್ತಿಗಾಗಲೇ ಇವರ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಕ್ಯಾಮರಾ, ಕಂಪ್ಯೂಟರ್, ವಾದ್ಯ ಪರಿಕರಗಳು, ಎಲೆಕ್ಟ್ರಿಕ್ ವಸ್ತುಗಳು ಹಾಗೂ ಗೃಹಪಯೋಗಿ ಸಾಮಾನುಗಳು ಹಾಗೂ ಹೆಂಚಿನ ಮೇಲ್ಭಾವಣಿಯಲ್ಲಿದ್ದ ಮರಮಟ್ಟುಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲವಾದ್ದರಿಂದ ದೊಡ್ಡ ದುರಂತ ತಪ್ಪಿದೆ. ಈ ಸಂಬಂಧ ಮಂಜುನಾಥ್ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜು ರವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಕೂಡ ಇವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಅಥವಾ ಸಂಬಂಧಪಟ್ಟ ಜೆಇ ರನ್ನಾಗಲೀ, ಸಿಬ್ಬಂಧಿಯಾಗಲಿ ಕಳುಹಿಸಿಲ್ಲ ಎಂಬುದು ಮಂಜುನಾಥ್‌ರವರ ಆರೋಪವಾಗಿದೆ.
ಸ್ಥಳಕ್ಕೆ ಶಾಸಕ ಎ. ಆರ್. ಕೃಷ್ಣಮೂರ್ತಿ ಭೇಟಿ ನೀಡಿ ಮಂಜುನಾಥ್ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಈ ಸಂಬಂಧ ದೂರು ನೀಡಿ, ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಇವರೂ ಕೂಡ ಖುದ್ದು ಸೆಸ್ಕ್ ಎಇಇಗೆ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದಾರೆ. ಆದರೂ ಕೂಡ ಇವರು ಬಂದಿಲ್ಲ ಎಂದು ಚಿಕ್ಕನಂಜಮ್ಮ ಕುಟುಂಬದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.