ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಗೂ ಬರ...!

KannadaprabhaNewsNetwork | Updated : May 23 2024, 11:54 AM IST

ಸಾರಾಂಶ

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸ್ಥಳೀಯ ಆಡಳಿತ ಸಹಕಾರ ಇಲ್ಲದ ಕಾರಣ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತಿಲ್ಲ

 ಗದಗ :  ಗದಗ ವಿಧಾನಸಭಾ ಕ್ಷೇತ್ರದಲ್ಲಿಯೇ ದೊಡ್ಡ ಪಟ್ಟಣವಾಗಿರುವ ಮುಳಗುಂದದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವಿದ್ಯುತ್ ಗ್ರಿಡ್ ನಿರ್ಮಾಣ ನನೆಗುದಿಗೆ ಬಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಗೂ ಬರ ಬಂದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಚ್.ಕೆ. ಪಾಟೀಲ ಅವರಿಗೆ ಇಲ್ಲಿಯ ಸಮಸ್ಯೆಗಳು ಹೊಸದೇನಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸ್ಥಳೀಯ ಆಡಳಿತ ಸಹಕಾರ ಇಲ್ಲದ ಕಾರಣ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತಿಲ್ಲ ಎನ್ನುವ ಗಂಭೀರ ಆರೋಪವಾಗಿದೆ.

ಮುಳಗುಂದ ಪಟ್ಟಣ ವ್ಯಾಪ್ತಿಯಲ್ಲಿ ಹತ್ತಾರು ಬೃಹತ್ ಕಲ್ಲಿನ ಕ್ರಷರ್‌ಗಳು, ಮಿಲ್‌ಗಳು ಇದ್ದು, ಇವುಗಳು ನೂರಾರು ಕಾರ್ಮಿಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆರ್ಥಕವಾಗಿ ಬೆನ್ನೆಲುಬಾಗಿ ನಿಂತಿವೆ. ಆದರೆ ಕಲ್ಲಿನ ಕ್ರಷರ್, ಮಿಲ್ ಸೇರಿದಂತೆ ಸಣ್ಣ, ಪುಟ್ಟ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಅವಶ್ಯಕವಿದ್ದು, ಇಂತಹ ದೊಡ್ಡ ಪಟ್ಟಣದಲ್ಲಿ ವಿದ್ಯುತ್‌ಗೆ ಬರ ಎಂದರೆ ಯಾರೂ ನಂಬುವುದಿಲ್ಲ. ಯಾವ ಸಮಯದಲ್ಲಿ ವಿದ್ಯುತ್ ಇರುತ್ತೆ ಎನ್ನುವುದು ತಿಳಿಯದಂತಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಹೇಳಲಾರದು, ಮಳೆ ಬರುವ ಮುಂಚೆ ಎರಡ್ಮೂರು ತಾಸು, ಮಳೆಯಾದ ನಂತರ ಎರಡ್ಮೂರು ತಾಸು ವಿದ್ಯುತ್ ಕಡಿತವಾಗುತ್ತದೆ. ಅತಿಯಾದ ವಿದ್ಯುತ್ ಕಡಿತದಿಂದ ಇಲ್ಲಿನ ಜನತೆ ಬೇಸತ್ತು ಹೋಗಿದ್ದು, ವ್ಯಾಪಕವಾಗಿ ವಿದ್ಯುತ್ ಕ್ಷಾಮ ತಲೆದೂರಿದೆ.

ಮುಳಗುಂದ ಪಟ್ಟಣಕ್ಕೆ ಮೊದಲು ಅರ್ಧ ಪ್ರದೇಶ ಶಿರಹಟ್ಟಿ ಲೈನ್ ಹಾಗೂ ಇನ್ನರ್ಧ ಗದಗ ಲೈನ್‌ಗಳ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿತ್ತು, ಆದರೆ ಕ್ರಷರ್‌ಗಳಿಗೆ ವೋಲ್ಟೇಜ್ ಸಾಕಾಗುವುದಿಲ್ಲ ಎಂಬ ಕಾರಣಕ್ಕೂ ಅಥವಾ ರಾಜಕೀಯ ನಾಯಕರಗಳ ಪ್ರಭಾವಕ್ಕೂ ಏನೋ ಪಟ್ಟಣದ ಇನ್ನುಳಿದ ಅರ್ಧ ಪ್ರದೇಶಕ್ಕೂ ಗದಗ ಲೈನ್ ಮೂಲಕವೇ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಶಿರಹಟ್ಟಿ ಲೈನ್ ಮೂಲಕ ಪಟ್ಟಣಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್‌ನ್ನ ಪೂರ್ತಿ ಬಸಾಪೂರ, ಶೀತಾಲಹರಿ ಹಾಗೂ ಕಲ್ಲಿನ ಕ್ರಷರ್‌ಗಳಿಗೆ ನೀಡಲಾಗುತ್ತಿದೆ.

ವೋಲ್ಟೇಜ್ ಸಮಸ್ಯೆ:

ಗದಗ ಗ್ರಿಡ್ ನಿಂದ ಪೂರೈಕೆಯಾಗುವ ವಿದ್ಯುತ್ ಮುಳಗುಂದ ಪಟ್ಟಣ ತಲುಪವ ವೇಳೆಗೆ ಅಂದಾಜು ಎಲ್ಲ ಗ್ರಾಮಗಳಲ್ಲಿನ ಲೈನ್, ಹೊಲಗಳಲ್ಲಿನ ಲೈನ್ ಸೇರಿ ಒಟ್ಟು 40 ಕಿಮೀ ಸಂಚರಿಸಬೇಕು. ಹಾಗಾಗಿ ಮುಳಗುಂದ ಪಟ್ಟದಲ್ಲಿ ತೀವ್ರವಾದ ವೋಲ್ಟೋಜ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಬೀದಿ ದೀಪಗಳು, ಈ ಹಿಂದೆ ಹಿರಿಯರು ಬಳಸುತ್ತಿದ್ದ ಸೀಮೆ ಎಣ್ಣೆ ದೀಪಗಳಂತೆ ಉರಿದರೆ, ಕೊಳವೆಬಾವಿಗಳು, ಗಿರಣಿಗಳು ಪ್ರಾರಂಭವಾಗುವುದೇ ದುಸ್ಥರವಾಗುತ್ತಿದೆ.

ಸಮಸ್ಯೆ ತಪ್ಪಿದ್ದಲ್ಲ:ಗದಗ ನಗರ ಸೇರಿಸಂತೆ ಗ್ರಾಮೀಣ ಭಾಗದ ಸುತ್ತಮುತ್ತಲಿನ ಯಾವುದೇ ಭಾಗಗಳಲ್ಲಿ ಲೈನ್ ನಲ್ಲಿ ಪಾಲ್ಟ್ ಆದರೂ ಮುಳಗುಂದ ಪಟ್ಟಣಕ್ಕೆ ವಿದ್ಯುತ್ ಸಮಸ್ಯೆ ತಪ್ಪಿದ್ದಲ್ಲ. ದಿನೇ ದಿನೇ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಜನ ವಸತಿ ಪ್ರದೇಶ ಗಣನೀಯವಾಗಿ ವ್ಯಾಪಿಸುತ್ತಿದ್ದು, ಪ್ರದೇಶಕ್ಕೆ ಅನುಗುಣವಾಗಿ ವೋಲ್ಟೇಜ್ ಇರದ ಕಾರಣ ಪದೇ ಪದೇ ಲೈನ್ ಪಾಲ್ಟ್ ಆಗುತ್ತಿದೆ. ಮುಳಗುಂದ, ಚಿಂಚಲಿ ನೀಲಗುಂದ, ಕಲ್ಲೂರ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಪ್ರತ್ಯೇಕ ಲೈನ್ ಇರದೇ ಗದಗ ಗ್ರಿಡ್‌ನಿಂದ ಒಂದೇ ಲೈನ್ ಮೂಲಕ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಸ್ವಲ್ಪ ತೊಂದರೆಯಾದರೂ ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತಿದೆ. ಮುಳಗುಂದ ಪಟ್ಟಣಕ್ಕೆ ಗ್ರೀಡ್ ನಿರ್ಮಾಣವಾದರೆ ಈ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ನಾಲ್ಕೈದು ವರ್ಷಗಳ ಹಿಂದೆಯೇ ಮುಳಗುಂದದಲ್ಲಿ ಗ್ರಿಡ್ ನಿರ್ಮಾಣವಾಗಬೇಕಿತ್ತು, ಅದಕ್ಕಾಗಿ ಭೂಮಿ ಖರೀದಿ ಸಂದರ್ಭದಲ್ಲಿ ಹೆಚ್ಚಿನ ಹಣ ಕೇಳುವ ನೆಪದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರು, ಈಗ ಅದು ಮತ್ತಷ್ಟು ಹೆಚ್ಚಿಗೆಯಾಗಿದೆ, ಹಾಗಾಗಿ ರೈತರು ಹೆಸ್ಕಾಂ ಅಧಿಕಾರಿಗಳು ಕೇಳುವ ದರಕ್ಕೆ ಜಮೀನು ನೀಡುವುದಿಲ್ಲ, ಕೂಡಲೇ ಹೆಚ್ಚಿನ ಬೆಲೆ (ಮಾರುಕಟ್ಟೆ ಬೆಲೆ) ನೀಡಿ ಭೂಮಿ ಖರೀದಿಸಿ ಗ್ರಿಡ್ ನಿರ್ಮಾಣಕ್ಕೆ ಗಮನ ನೀಡಬೇಕಿದೆ.

ಗ್ರಿಡ್ ನಿರ್ಮಾಣಕ್ಕೆಂದು ಭೂಮಿ ಖರೀದಿಗೆ ಈ ಹಿಂದೆ ಸರ್ಕಾರ ಎಕರೆಗೆ ಅಂದಾಜು ₹10 ಲಕ್ಷ ನಿಗದಿ ಮಾಡಿತ್ತು. ಸದ್ಯ ಭೂಮಿ ಮಾರಾಟಗಾರರು ಸರ್ಕಾರ ನಿಗದಿ ಮಾಡಿದ್ದ ಬೆಲೆಗಿಂತ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದರಿಂದ ಗ್ರೀಡ್ ನಿರ್ಮಾಣಕ್ಕೆ ಹಿನ್ನೆಡೆಯಾಗಿದೆ ಎಂದು ಮುಳಗುಂದ ಪಪಂ ಸದಸ್ಯ ವಿಜಯ ನೀಲಗುಂದ ಹೇಳಿದ್ದಾರೆ.

ಮುಳಗುಂದ ಪಟ್ಟಣದಲ್ಲಿ ಅತಿಯಾದ ವಿದ್ಯುತ್ ಕಡಿತದಿಂದ ವಿಪರಿತ ಸಮಸ್ಯೆಯಾಗಿದ್ದು, ಸಣ್ಣ, ಪುಟ್ಟ ಕೈಗಾರಿಕೋದ್ಯಮ ಹಾಕಿಕೊಂಡು ಅದರ ಮೇಲೆ ಜೀವನ ನಡೆಸುತ್ತಿರುವವರಿಗೆ ತುಂಬಾ ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಗ್ರಿಡ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ದಾವೂದ್ ಜಮಾಲ ತಿಳಿಸಿದ್ದಾರೆ.

Share this article