ಒಸಿ ಇದ್ದರಷ್ಟೇ ಕಟ್ಟಡಕ್ಕೆ ಇನ್ನು ವಿದ್ಯುತ್‌ ಸಂಪರ್ಕ : ಕೆಇಆರ್‌ಸಿಯಿಂದ ಎಸ್ಕಾಂಗಳಿಗೆ ಸೂಚನೆ

KannadaprabhaNewsNetwork |  
Published : Mar 15, 2025, 01:05 AM ISTUpdated : Mar 15, 2025, 07:45 AM IST
ವಿದ್ಯುತ್‌ | Kannada Prabha

ಸಾರಾಂಶ

ರಾಜ್ಯಾದ್ಯಂತ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳು ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದಿದ್ದರೆ ವಿದ್ಯುತ್‌ ಸಂಪರ್ಕ ನೀಡಬಾರದು ಎಂದು ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳಿಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ಸ್ಪಷ್ಟ ಆದೇಶ ಮಾಡಿದೆ.

 ಬೆಂಗಳೂರು : ರಾಜ್ಯಾದ್ಯಂತ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳು ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದಿದ್ದರೆ ವಿದ್ಯುತ್‌ ಸಂಪರ್ಕ ನೀಡಬಾರದು ಎಂದು ಬೆಸ್ಕಾಂ ಸೇರಿ ಎಲ್ಲಾ ಎಸ್ಕಾಂಗಳಿಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ಸ್ಪಷ್ಟ ಆದೇಶ ಮಾಡಿದೆ.ಸುಪ್ರೀಂ ಕೋರ್ಟ್‌ ತನ್ನ 2024ರ ಡಿ.17ರ ಆದೇಶದಲ್ಲಿ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶ ಮಾಡಿದೆ. 

ಅದರಂತೆ ಬೆಂಗಳೂರಿನ ಬೆಸ್ಕಾಂ, ಮಂಗಳೂರು, ಹುಬ್ಬಳ್ಳಿ, ಚಾಮುಂಡೇಶ್ವರಿ (ಮೈಸೂರು), ಕಲಬುರಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸರಬರಾಜು ಸಹಕಾರ ಸೊಸೈಟಿ ಸೇರಿ ಆರೂ ಎಸ್ಕಾಂಗಳು ಒಸಿ ಪ್ರಮಾಣಪತ್ರ ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ನೀಡಬಾರದು. ಈ ಬಗ್ಗೆ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಎಸ್ಕಾಂಗಳು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಈ ಹಿಂದೆ 2016ರಲ್ಲೇ ಬೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ ಕಡ್ಡಾಯ ಮಾಡಲಾಗಿತ್ತು. ಬಿಬಿಎಂಪಿಯು ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವವರಿಗೆ ಅಥವಾ ಮಂಜೂರಾದ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ಸ್ವಾಧೀನಾನುಭವ ಪತ್ರ ನೀಡಿರಲಿಲ್ಲ. ಇದರಿಂದ 3 ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ದೊರೆತಿರಲಿಲ್ಲ.

2022ರಲ್ಲಿ ನಗರಾಭಿವೃದ್ಧಿ ಇಲಾಖೆ ಈ ನಿಯಮ ಸಡಿಲಿಸಿ ವಿದ್ಯುತ್‌ ಸಂಪರ್ಕ ಪಡೆಯಲು ಇನ್ನು ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ದಾಖಲೆ ಇದ್ದರೆ ಸಾಕು ಎಂದು ಮಾಡಿತ್ತು.

ಇದೀಗ ಸುಪ್ರೀಂ ಕೋರ್ಟ್‌ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ಹಾಗೂ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ಸಂಪರ್ಕ ನೀಡುತ್ತಿರುವ ಬಗ್ಗೆ ತೀವ್ರ ಕಿಡಿಕಾರಿದೆ.ಸುಪ್ರೀಂಕೋರ್ಟ್‌ ಹೇಳಿರುವುದೇನು?:

ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಯಾವುದೇ ಕಾರಣಕ್ಕೂ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ನಿರಂತವಾಗಿ ಪರಿಶೀಲನೆ ನಡೆಸಬೇಕು. ಯಾವುದೇ ನಕ್ಷೆ ಉಲ್ಲಂಘನೆ ಆಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಕ್ಷೆ ಮಂಜೂರಾತಿ ಪ್ರತಿಯೊಂದನ್ನು ಪ್ರದರ್ಶಿಸಬೇಕು. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಸ್ವಾಧೀನಾನುಭವ ಪತ್ರ ವಿತರಣೆ ಮಾಡಬೇಕು. ಒಂದೊಮ್ಮೆ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.ಜತೆಗೆ ಮುಖ್ಯವಾಗಿ ‘ಒಸಿ’ ವಿತರಣೆ ಬಳಿಕವಷ್ಟೇ ನೀರಿನ ಸಂಪರ್ಕ, ವಿದ್ಯುತ್‌ ಸಂಪರ್ಕ, ಒಳಚರಂಡಿ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದೆ.

ಬಿಬಿಎಂಪಿಯಿಂದಲೂ ಆದೇಶ:ಸುಪ್ರೀಂ ಕೋರ್ಟ್‌ ಆದೇಶದಂತೆ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ನಿಯಮಗಳನ್ನು ಜಾರಿ ಮಾಡಿರುವ ಬಿಬಿಎಂಪಿ ಆಯುಕ್ತರು, ಅಕ್ರಮ ನಿರ್ಮಾಣಗಳಿಗೆ ವಿದ್ಯುತ್‌ ಮತ್ತು ನೀರು, ಒಳಚರಂಡಿ ಸಂಪರ್ಕ ಸ್ಥಗಿತಗೊಳಿಸಲು ಆಯಾ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ.

ಕಟ್ಟಡ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ ಆ ಸಂದರ್ಭದಲ್ಲೇ ನೋಟಿಸ್‌ ಜಾರಿ ಮಾಡಬೇಕು. ಬೆಸ್ಕಾಂ ಹಾಗೂ ಜಲಮಂಡಳಿಗೆ ಮಾಹಿತಿ ನೀಡಿ, ತಾತ್ಕಾಲಿಕ ಅಥವಾ ಶಾಶ್ವತ ಸೇವಾ ಸಂಪರ್ಕ ಕಡಿತಗೊಳಿಸಲು ವಲಯ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ